ಮಂಗಳೂರು : ಕೊಂಚಾಡಿಯ ಶೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ಯಕ್ಷ ವೃಂದದ ವತಿಯಿಂದ ನಡೆಯಲಿರುವ ಯಕ್ಷಗಾನ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 04-11-2023 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಜನಾ ಮಂದಿರದ ವಿಜಯ ಕುಮಾರ್ ದೀಪ ಬೆಳಗಿದರೇ ಯಕ್ಷ ಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರು ಉದ್ಘಾಟಿಸಿ “ಹಿಂದೆ ಯಕ್ಷಗಾನವನ್ನು ಕಲಿಯಲು ಅವಕಾಶಗಳಿರಲಿಲ್ಲ. ಕಲಾವಿದ ತನ್ನ ಸ್ವ ಪ್ರಯತ್ನದಿಂದ ಕಲಿತು ಬೆಳೆಯುತ್ತಿದ್ದ. ಮಳೆಗಾಲದಲ್ಲಿ ಉಳ್ಳವರ ಮನೆಯಲ್ಲಿ ಉಳಿದು ಕಲಿಯುತ್ತಾ, ಕಲೆಯನ್ನು ವೈಭವದ ಸ್ಥಿತಿಗೆ ಒಯ್ಯುತ್ತಿದ್ದ. ಆದರೆ ಇಂದು ಕಲಾಸಕ್ತನಾದವನಿಗೆ ಅದು ಅಂಗೈಯಲ್ಲೇ ದೊರಕುತ್ತಿದೆ. ಅಲ್ಲಲ್ಲಿ ನಾಟ್ಯ, ಹಿಮ್ಮೇಳಗಳನ್ನು ಕಲಿಸುವ ತರಗತಿಗಳಿವೆ. ಸಮರ್ಥ ಮತ್ತು ಶಾಸ್ತ್ರೀಯವಾಗಿ ಕಲಿಸುವ ನೃತ್ಯ ಗುರುಗಳಿದ್ದಾರೆ ಹಾಗಾಗಿ ಮಕ್ಕಳು ಎಳವೆಯಲ್ಲಿ ಯಕ್ಷ ನಾಟ್ಯವನ್ನು ಕರಗತ ಗೊಳಿಸಿಕೊಳ್ಳುತ್ತಾರೆ. ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಾರೆ. ಕಲೆಯನ್ನು ಉಳಿಸುತ್ತಾರೆ. ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಈ ಶ್ರೀ ರಾಮ ಯುಕ್ತವೃಂದವೂ ಬೆಳೆದು ಕೀರ್ತಿ ಗಳಿಸಲಿ.“ ಎಂದು ಶುಭ ಹಾರೈಸಿದರು. ಶ್ರೀಸುರೇಶ್ ಪೂಜಾರಿ, ಶೀಮತಿ ಮೀನಾ ನವೀನ ಚಂದ್ರ, ಶಿಲ್ಪಾ ವೀರೇಶ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಯಕ್ಷ ವೃಂದದ ನಿರ್ದೇಶಕಿ ಶ್ರೀಮತಿ ವಿಜಯಲಕ್ಷೀ ಯಲ್. ನಿಡ್ವಣ್ಣಾಯರು ಪ್ರಾತ್ಯಕ್ಷಿತೆ ನೀಡುತ್ತಾ ನಾಟ್ಯಾರಂಭ ಮಾಡಿದರು.ಶ್ರೀಮತಿ ಜ್ಯೋತಿ ತಂತ್ರಿ ನಿರ್ವಹಿಸಿ, ಸುಪ್ರಭಾ ವಂದಿಸಿದರು.

