ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡದ ಸಂಯೋಜನೆಯಲ್ಲಿ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲದಲ್ಲಿ ಒಂದು ದಿನದ ಯಕ್ಷಗಾನ ವಸ್ತ್ರಾಲಂಕಾರದ ಕಾರ್ಯಾಗಾರವು ದಿನಾಂಕ 07-04-2024ರಂದು ನಡೆಯಿತು.
ಈ ಕಾರ್ಯಾಗಾರವನ್ನು ಮೇಕಪ್ ಮಾಡುವ ಮೂಲಕ ಉಪನ್ಯಾಸಕರಾದ ಡಾ. ರಾಮಮೂರ್ತಿಯವರು ಉದ್ಘಾಟಿಸಿ ಮಾತನಾಡಿ “ಯಕ್ಷಗಾನ ವೇಷ ಕಟ್ಟಿಕೊಂಡು ರಂಗಸ್ಥಳದಲ್ಲಿ ಕುಣಿಯುವುದಕ್ಕಷ್ಟೇ ಕಲಾವಿದ ಪರಿಪೂರ್ಣನಾಗುವುದಿಲ್ಲ, ಯಕ್ಷಗಾನದಲ್ಲಿ ವೇಷಗಾರಿಕೆಯೂ ಪ್ರಧಾನವಾಗಿರುತ್ತದೆ. ರಂಗದಲ್ಲಿ ಕುಣಿಯುವುದಕ್ಕೆಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮುಖ್ಯವಾದುದು ಬಣ್ಣಗಾರಿಕೆ, ವೇಷ ಕಟ್ಟಿಕೊಳ್ಳುವುದು ಕೂಡಾ. ಕಲಾವಿದನೂ ಸ್ವಯಂ ವೇಷ ಕಟ್ಟಿಕೊಳ್ಳುವುದಕ್ಕೂ ಕಲಿತಿರಬೇಕು. ಅದೂ ಕೂಡಾ ಒಂದು ಕಲೆ. ಯಕ್ಷಗಾನ ವೇಷಭೂಷಣದಲ್ಲಿ ಕ್ಯಾದಿಗೆ ಮುಂದಲೆ, ಮುಂಡಾಸು, ಕಿರೀಟ, ಬಣ್ಣಗಾರಿಕೆ, ವಸ್ತ್ರಾಲಂಕಾರದಲ್ಲಿ ಹಿಂದೆಗಿಂತಲೂ ಈಗ ತುಂಬಾ ಬದಲಾವಣೆಯಾಗಿದೆ ಅಥವಾ ಸುಧಾರಣೆಗೊಂಡಿದೆ. ಈ ವಿಚಾರ ಇಂದಿನ ಮಕ್ಕಳು, ಯುವಕರು ತಿಳಿಯಲು ಇಂತಹ ಕಾರ್ಯಾಗಾರ ಉಪಯುಕ್ತವಾಗಿದೆ” ಎಂದು ಹೇಳಿದರು.
ಹಾಗೇ ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್‌ರು, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾದ ಕೋಟ ಸುದರ್ಶನ ಉರಾಳ, ಯಕ್ಷದೇಗುಲದ ಹಿಂದಿನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್, ಕಲಾವಿದ ಉದಯ ಬೋವಿ ಉಪಸ್ಥಿತರಿದ್ದರು. ಯಕ್ಷದೇಗುಲದ ಬಾಲಕೃಷ್ಣ ಭಟ್‌ರು ಪ್ರಾಸ್ತವಿಕ ಮಾತನಾಡಿ, ಶ್ರೀ ವಿದ್ಯಾ ಧನ್ಯವಾದ ಗೈದರು. ಕಾರ್ಯಕ್ರಮವನ್ನು ಶ್ರೀರಾಮ್ ಹೆಬ್ಬಾರ್ ನಿರೂಪಿಸಿದರು. ನಂತರ ಬಣ್ಣಗಾರಿಕೆ, ಕ್ಯಾದಿಗೆ ಮುಂದಲೆ, ಅಟ್ಟೆಕಟ್ಟುವ ಕ್ರಮ, ವಸ್ತ್ರಾಲಂಕಾರದ ಬಗ್ಗೆ ತಿಳಿಸಲಾಯಿತು. ಅಲ್ಲದೇ ಇಲ್ಲಿ ಸ್ವತಃ ಮಕ್ಕಳೇ ಮೇಕಪ್‌ನ್ನು ಮಾಡಿಕೊಂಡರು. ಈ ಕಾರ್ಯಾಗಾರದಲ್ಲಿ ಸುಮಾರು 50 ಮಂದಿ ಮಕ್ಕಳು ಹಾಗೂ ದೊಡ್ಡವರು ಭಾಗವಹಿಸಿದರು.