ಬೆಂಗಳೂರು : ಬೆಂಗಳೂರಿನ ‘ತ್ವರಿತ’ ಮತ್ತು ‘ಬಿ. ಐ. ಸಿ.’ ಸಂಸ್ಥೆಗಳ ಸಹಕಾರದಲ್ಲಿ ಬೆಂಗಳೂರಿನ ‘ಯಕ್ಷದೇಗುಲ’ದ ಪರಿಕಲ್ಪನೆಯಲ್ಲಿ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025 ರಂದು ಬೆಂಗಳೂರಿನ ದೊಂಬ್ಲೂರಿನಲ್ಲಿರುವ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯಿತು.
ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಂಗದಲ್ಲಿ ಗಣಪತಿ ಪೂಜೆ ನಡೆಸುವ ಮೂಲಕ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಮತ್ತು ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್ ಇವರು ನಡೆಸಿಕೊಟ್ಟರು. ಎರಡು ಗಂಟೆಗಳ ಕಾಲ ನಡೆದ ಈ ಪ್ರಾತ್ಯಕ್ಷಿಕೆಯಲ್ಲಿ ಯಕ್ಷಗಾನದ ಕ್ಯಾದಿಗೆ ಮುಂದಲೆಯ ಅಟ್ಟೆ ಕಟ್ಟುವ ಕ್ರಮ, ಬಣ್ಣದ ವೇಷದ ಮುಖವರ್ಣಿಕೆ, ವೇಷಭೂಷಣ ತೊಡುವ ಕ್ರಮ, ಹಸ್ತಾಭಿನಯ, ಯುದ್ಧ ಕುಣಿತ, ಪ್ರಯಾಣ ಕುಣಿತ, ಕೃಷ್ಣನ ಒಡ್ಡೋಲಗ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಎರಡು ಯಕ್ಷಗಾನದ ಪ್ರಸಂಗದ ಸನ್ನಿವೇಷ ನಡೆಸಲಾಯಿತು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಚಿನ್ಮಯಿ, ಚಂಡೆಯಲ್ಲಿ ಪನ್ನಗ ಹಾಗೇ ಕಲಾವಿದರಾಗಿ ಸುಜಯೀಂದ್ರ ಹಂದೆ, ಪ್ರಿಯಾಂಕ ಕೆ. ಮೋಹನ್, ಕೃಷ್ಣಮೂರ್ತಿ ಉರಾಳ, ಕೃಷ್ಣಮೂರ್ತಿ ತುಂಗ, ಶ್ರೀವತ್ಸ, ಶ್ರೇಯಾ, ಅನಿಕಾ, ಸರಸ್ವತಿ ಮತ್ತು ಚೈತ್ರಾ ಭಾಗವಹಿಸಿದರು.