ಕಾರ್ಕಳ : ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನ ಯಕ್ಷ ಶಿಕ್ಷಣವು ದಿನಾಂಕ 30 ಜೂನ್ 2025ರಂದು ಆರಂಭಗೊಂಡಿತು. ಕಾರ್ಕಳದ ಯಕ್ಷ ಕಲಾರಂಗ (ರಿ.) ಸಂಸ್ಥೆಯು ಕಳೆದ 13 ವರ್ಷಗಳಿಂದ ಯಕ್ಷಗಾನ ಕಲೆಗಾಗಿ ತಾಲೂಕಿನ ಆಸಕ್ತಿಯ ವಿದ್ಯಾ ಸಂಸ್ಥೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣ ನೀಡುತ್ತಿದ್ದು, ಹದಿನಾಲ್ಕನೇ ವರ್ಷದ ಪ್ರಸಕ್ತ ಸಾಲಿನಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದೊಂದಿಗೆ ಯಕ್ಷಧ್ರುವ ಯಕ್ಷಶಿಕ್ಷಣ ಅಭಿಯಾನ ಕಾರ್ಯಕ್ರಮವು ಪೆರ್ವಾಜೆ ಹೈಸ್ಕೂಲಿನಲ್ಲಿ ಉದ್ಘಾಟನೆಗೊಂಡಿತು.
ಫೌಂಡೇಶನ್ನಿನ ಕಾರ್ಕಳ ಘಟಕದ ಸಂಚಾಲಕರಾದ ಪ್ರೊ. ಪದ್ಮನಾಭ ಗೌಡರವರು ಉದ್ಘಾಟಿಸಿ “ಎಲ್ಲಿ ಕಲಾರಾಧನೆ ನಡೆಯುತ್ತದೋ ಅಲ್ಲಿ ಅರಳಿದ ಮನಸ್ಸುಗಳು ಇರುತ್ತದೆ. ಜೊತೆಗೆ ಅರಿಷ್ಡವೈರಗಳು ದೂರವಾಗುತ್ತದೆ. ಆಗ ನಾವು ದೇವತೆಗಳಿಗೆ ಸಮಾನರಾಗುತ್ತೇವೆ” ಎಂದು ಹೇಳಿದರು.
ಶಾಲಾಭಿವೃದ್ದಿ ಸಮಿತಿಯ ಉಪಾದ್ಯಕ್ಷೆ ಶ್ರೀಮತಿ ವೀಣಾ ಭಂಡಾರಿ ಅಧ್ಯಕ್ಷತೆ ವಹಿಸಿ “ಯಕ್ಷಗಾನ ಸಂಸ್ಕ್ರತಿಯ ಕಲೆ, ಪರಂಪರೆಯ ಕಲೆ. ಇದನ್ನು ನಾವು ಎಳೆಯ ವಯಸ್ಸಿನ ಮಕ್ಕಳಿಗೆ ಪಾಠದ ಜೊತೆ ಜೊತೆಗೆ ತಿಳಿ ಹೇಳುವುದು ಹಿರಿಯರಾದ ನಮ್ಮ ಜವಾಬ್ದಾರಿ” ಎಂದು ಕಾರ್ಕಳದ ಕಲಾರಂಗವನ್ನೂ, ಪಟ್ಲ ಫೌಂಡೇಶನ್ನನ್ನೂ ಅಭಿನಂದಿಸಿದರು.
ಕಲಾರಂಗದ ಅಧ್ಯಕ್ಷರಾದ ವಿಜಯ ಶೆಟ್ಟಿ, ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ, ಮುಖ್ಯ ಶಿಕ್ಷಕರಾದ ದಿವಾಕರ್, ಯಕ್ಷ ಗುರುಗಳಾದ ಅಜಿತ್ ಕುಮಾರ್ ಜೈನ್, ದೈಹಿಕ ಶಿಕ್ಷಕಿ ಶ್ರೀಮತಿ ವೇದಾವತಿ ಎನ್., ಕೋಶಾಧ್ಯಕ್ಷ ಪ್ರೊ. ಶ್ರೀವರ್ಮ ಅಜ್ರಿ, ಕೆ. ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷ ಗುರುಗಳಾದ ಸಾಣೂರು ಗಣೇಶ್ ಶೆಟ್ಟಿ, ಕಾರ್ಕಳ ಕೀರ್ತನ್ ಕೂಡಾ ಭಾಗವಹಿಸಿದ್ದರು. ಯಕ್ಷ ಶಿಕ್ಷಣದ ಬಗ್ಗೆ ಮಹಾವೀರ ಪಾಂಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ಶಾಲಾ ಮುಖ್ಯ ಶಿಕ್ಷಕ ದಿವಾಕರ್ ಸ್ವಾಗತಿಸಿ, ಸಹ ಶಿಕ್ಷಕಿ ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಕಿ ವೇದಾವತಿ ಎನ್. ವಂದಿಸಿದರು. ನಂತರ ಅಜಿತ್ ಕುಮಾರ್ ಜೈನ್ ವೀಳ್ಯ ಪಡೆದುಕೊಂಡು ತರಗತಿ ಆರಂಬಿಸಿದರು.