ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವಾರ್ಷಿಕೋತ್ಸವ ‘ಶ್ರೀ ಆಂಜನೇಯ -57’ರ ಆಮಂತ್ರಣ ಪತ್ರಿಕೆಯನ್ನು ದಿನಾಂಕ 01 ಡಿಸೆಂಬರ್ 2025ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಢೆ ಬಿಡುಗಡೆ ಮಾಡಿ ಸಮಾರಂಭದ ಯಶಸ್ಸಿಗೆ ಶುಭ ಹಾರೈಸಿ, ಸಂಘವು ದೇವಳದ ವತಿಯಿಂದ ಅಪೇಕ್ಷಿಸಿದ ಸಕಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಆಮಂತ್ರಣ ಪತ್ರಿಕೆ ಬಿಡುಗಡೆಗೆ ಮುನ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭ ಗುಡಿಯ ಮುಂದೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಂಜನೇಯ ಉಭಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಆ ಬಳಿಕ ಸಂಘದ ವತಿಯಿಂದ ತಾಳಮದ್ದಳೆ ‘ಪಂಚವಟಿ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣಮೂಲೆ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಸಮರ್ಥ ವಿಷ್ಣು ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಗುಂಡ್ಯಡ್ಕ ಈಶ್ವರ ಭಟ್), ಮುನಿಗಳು (ಭಾಸ್ಕರ ಬಾರ್ಯ), ಲಕ್ಷ್ಮಣ (ದುಗ್ಗಪ್ಪ ನಡುಗಲ್ಲು), ಸೀತೆ (ಮಾಂಬಾಡಿ ವೇಣುಗೋಪಾಲ ಭಟ್), ಘೋರ ಶೂರ್ಪನಖಿ (ಗುಡ್ಡಪ್ಪ ಬಲ್ಯ), ಮಾಯಾ ಶೂರ್ಪನಖಿ (ಭಾಸ್ಕರ ಶೆಟ್ಟಿ ಸಾಲ್ಮರ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

