ಬಂಟ್ವಾಳ : ಬಂಟ್ವಾಳ ದರ್ಬೆ ಯಕ್ಷಕಾವ್ಯ ತರಂಗಿಣಿ ಮತ್ತು ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ‘ಬಣ್ಣಗಾರಿಕೆ ಶಿಬಿರ’ವು ದಿನಾಂಕ 19-11-2023ರಂದು ನೇರಂಬೋಳು ಸಭಾಭವನದಲ್ಲಿ ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಸಂಘಟಕ ಮತ್ತು ಕಲಾವಿದರಾದ ಶ್ರೀ ಅಶೋಕ ಶೆಟ್ಟಿ ಸರಪಾಡಿ ಇವರು ಶಿಬಿರವನ್ನು ಉದ್ಘಾಟಿಸಿ, ಯಕ್ಷಕಾವ್ಯ ತರಂಗಿಣಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಯಕ್ಷಗಾನದ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಸಾಧನ ಕಲಾವಿದ ಶ್ರೀ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಇವರನ್ನು ಸನ್ಮಾನಿಸಲಾಯಿತು. ಇವರು ಬಣ್ಣಗಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ಬಣ್ಣ ಹೇಗೆ ಹಚ್ಚುವುದು ಮತ್ತು ಯಕ್ಷಗಾನದಲ್ಲಿ ಬಣ್ಣದ ಪಾತ್ರ ಹೇಗೆ ಎಂಬ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮವು ಶ್ರೀ ಸಂಜೀವ ಕಜೆಪದವು ಇವರ ಮಾರ್ಗದರ್ಶನದಲ್ಲಿ ನಡೆದು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ರವಿ ನೇರಂಬೋಳು ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ಬಣ್ಣಗಾರಿಕೆ ಯಕ್ಷಗಾನ ಶಿಬಿರದಲ್ಲಿ ಯಕ್ಷಕಾವ್ಯ ತರಂಗಿಣಿ ದರ್ಬೆ ಮತ್ತು ಶ್ರೀ ನಾಗಬ್ರಹ್ಮ ಮಹಮ್ಮಾಯಿ ತಂಡ ಮಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ಮಕ್ಕಳಿಗೆ ಯಕ್ಷಗಾನ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.