ಬೆಂಗಳೂರು : ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಯಕ್ಷಗಾನ ಮುಖವರ್ಣಿಕೆ ಶಿಬಿರವು ದಿನಾಂಕ 03-09-2023 ರಂದು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಡುಪಿ ಎಂ.ಜಿ.ಎಂ. ಕಾಲೇಜಿನ ಉಪನ್ಯಾಸಕ ಮತ್ತು ಯಕ್ಷಗಾನ ಕಲಾವಿದರಾದ ರಾಘವೇಂದ್ರ ತುಂಗ “ಯೋಗಾಭ್ಯಾಸದಂತೆ ದೇಹ ಮತ್ತು ಮನಸ್ಸಿನ ಸಮನ್ವಯಕ್ಕೆ ಯಕ್ಷಗಾನ ಕಲೆ ಪೂರಕ. ನಿರಂತರ ಯಕ್ಷಗಾನ ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸುಗಳ ಕ್ಷಮತೆ ಹೆಚ್ಚಾಗಿ ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಲೆಯಲ್ಲಿ ತೊಡಗಿಕೊಳ್ಳುವುದಕ್ಕೆ ವೃತ್ತಿಪರತೆಯ ಅಗತ್ಯವಿದೆ. ಯಕ್ಷಗಾನ ಕಲಾವಿದರಾದವರು ತಾವೇ ವೇಷ ಧರಿಸುವುದನ್ನು ಅಭ್ಯಾಸ ಮಾಡಕೊಳ್ಳಬೇಕು. ಅದರಲ್ಲಿಯೂ ಯಕ್ಷಗಾನ ಮುಖವರ್ಣಿಕೆಯಲ್ಲಿ ಪರಿಣಿತಿ ಇದ್ದರೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ” ಎಂದು ಹೇಳಿದರು. ಈ ಯಕ್ಷಗಾನ ಶಿಬಿರದಲ್ಲಿ ಸುಮಾರು ಮೂವತೈದರಿಂದ ನಲವತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
ವೇದಿಕೆಯಲ್ಲಿ ಯಕ್ಷದೇಗುಲದ ಸುದರ್ಶನ ಉರಾಳ, ಯಕ್ಷ ಗುರು ಪ್ರಿಯಾಂಕ ಕೆ.ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು.ಸರಸ್ವತಿ ನಿರೂಪಿಸಿದರು.