ಮುಂಬಯಿ : ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿನಾಂಕ 10 ಆಗಸ್ಟ್ 2025ರಂದು ಮುಂಬೈಯ ಕಲ್ಯಾಣ್ ಶಹಾಡ್ ಪಾಟೀದಾರ್ ಸಭಾಂಗಣದಲ್ಲಿ ಜರಗಿದ ‘ಶ್ರೀದೇವಿ ಬನಶಂಕರಿ’ ಯಕ್ಷಗಾನ ಪ್ರದರ್ಶನ ಸಂದರ್ಭ ಏರ್ಪಡಿಸಿದ್ದ ಕಲಾವಿದರ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಂಬಯಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ “ಕರ್ಮಭೂಮಿ ಮುಂಬೈಗೆ ಆಗಮಿಸಿದ್ದರೂ ಜನ್ಮ ಭೂಮಿಯ ಆಚಾರ ವಿಚಾರಗಳನ್ನು ಮರೆಯಬಾರದು. ಮಾತೃಭಾಷೆಯ ಮೇಲೆ ಪ್ರೀತಿ ಇರಬೇಕು; ಆಗ ಮಾತ್ರ ಇಂತಹ ಕಲೆ ಜೀವಂತವಾಗಿರಲು ಸಾಧ್ಯ. ಯಕ್ಷಗಾನದಿಂದ ಸಂಸ್ಕಾರ ಸಂಸ್ಕೃತಿಯನ್ನು ಕಲಿಯಲು ಮತ್ತು ಉಳಿಸಲು ಸಾಧ್ಯ. ತುಳುನಾಡಲ್ಲಿ ತುಳು ಸಿನಿಮಾಗಳು ಓಡದಿದ್ದರೂ ಮುಂಬೈಯಲ್ಲಿ ಹೌಸ್ ಫುಲ್ ಆಗುತ್ತದೆ, ಕಾರಣ ನಾವು ಕಲೆ ಮತ್ತು ಕಲಾವಿದರಿಗೆ ನೀಡುವ ಗೌರವ ಅದು” ಎಂದು ಅಭಿಪ್ರಾಯಪಟ್ಟರು.
ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದ ಸಂಜೀವ ಶೆಟ್ಟಿ ಅರೆಹೊಳೆ “ಕಲೆ ಉಳಿಯಬೇಕಾದರೆ ಕಲಾವಿದ ಬೇಕು. ಆ ಕಲಾವಿದ ಬೆಳೆಯಬೇಕಾದರೆ ಕಲೆಗೆ ಪ್ರೋತ್ಸಾಹ ನೀಡುವವರು ಅವಶ್ಯ. ಕಲೆ ಮತ್ತು ಕಲಾವಿದ ಎರಡೂ ಉಳಿಯಬೇಕೆಂದರೆ ಅವರನ್ನು ದಾನಿಗಳು ಆಧರಿಸಬೇಕಾಗಿದೆ. ಮುಂಬೈ ಮಹಾನಗರಕ್ಕೆ ಯಾವನೇ ಕಲಾವಿದ ಬಂದಾಗ ಅವನನ್ನು ಬರಿಗೈಲಿ ಕಳುಹಿಸಿ ಕೊಟ್ಟವರಿಲ್ಲ. ಕಷ್ಟ ಎಂದು ತವರಿಗೆ ಬಂದ ಮಗಳಿಗೆ ತಾಯಿ ಹೇಗೆ ಬೇಕು ಬೇಕಾದುದನ್ನು ನೀಡುತ್ತಾಳೋ ಅದೇ ರೀತಿ ತವರೂರ ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಮುಂಬೈ ಹೋಟೆಲ್ ಉದ್ಯಮಿಗಳಿಗೆ ಇದೆ. ಹತ್ತಾರು ಮೇಳದ ಪ್ರದರ್ಶನಗಳನ್ನು ಮುಂಬೈಯಲ್ಲಿ ನಡೆಸುವ ಅವರ ಹೃದಯ ಶ್ರೀಮಂತಿಕೆ ದೊಡ್ಡದು” ಎಂದು ಕೃತಜ್ಞತೆಯ ನುಡಿಗಳನ್ನಾಡಿದರು. ಭಾಗವತರಾದ ದಿನೇಶ್ ಶೆಟ್ಟಿಯವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬಂಟರ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಸುಬ್ಬಯ ಶೆಟ್ಟಿ “ಯಕ್ಷಗಾನ ಕಲಾವಿದರನ್ನು ಮುಂಬಯಿ ಉಲ್ಲಾಸ ನಗರ-ಕಲ್ಯಾಣ್ ನ ಸಂಘಟಕರು ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇನ್ನು ಮುಂದೆಯೂ ಈ ಸಂಘಟನೆ ಸಾಂಸ್ಕೃತಿಕವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರಲಿ” ಎಂದರು.
ಮೇಳದ ಕಲಾವಿದರಾದ ಮಡಾಮಕ್ಕಿ ಪ್ರಭಾಕರ, ಐರಬೈಲು ಆನಂದ ಶೆಟ್ಟಿ, ಹೆನ್ನಾಬೈಲು ಸಂಜೀವ ಶೆಟ್ಟಿ, ನಾಗೇಶ್ ಕುಲಾಲ್, ಮುಂಬಯಿ ಸಂಚಾಲಕರಾದ ರಮೇಶ್ ಶೆಟ್ಟಿ ಬೆಳ್ಳಾಲ ಇವರನ್ನು ಗೌರವಿಸಲಾಯಿತು. ಉದ್ಯಮಿ ಕಲಾ ಪೋಷಕ ಪ್ರಕಾಶ್ ಶೆಟ್ಟಿ ಸೂರಾಲ್ ಹಾಗೂ ಪ್ರವೀಣಾ ಪ್ರಕಾಶ್ ಶೆಟ್ಟಿ ಇನ್ನಾ ದಂಪತಿಯನ್ನು ಸನ್ಮಾನಿಸಲಾಯಿತು,
ಬಂಟರ ಸಂಘ ಮುಂಬಯಿ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸುಬೋಧ್ ಭಂಡಾರಿ, ಉಪ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಚಾಲಕರಾದ ರವೀಂದ್ರ ವೈ. ಶೆಟ್ಟಿ ಶ್ರೀ ಮುಕಾಂಬಿಕಾ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಧ್ಯಕ್ಷರು ರಾಜೇಶ್ ಶೆಟ್ಟಿ, ಉದ್ಯಮಿಗಳಾದ ಸದಾನಂದ ಶೆಟ್ಟಿ ಡಾಲ್ಫಿನ್, ಸತೀಶ್ ಶೆಟ್ಟಿ ನಂದ್ರೋಳಿ, ಸತೀಶ್ ಎನ್. ಶೆಟ್ಟಿ, ದಯಾನಂದ ಶೆಟ್ಟಿ, ಬಂಟರ ಸಂಘ ಇಮುಂಬಯಿ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಎ. ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ಪ್ರವೀಣಾ ಪ್ರಕಾಶ್ ಶೆಟ್ಟಿ, ಶಹಾಡ್ ಶ್ರೀ ಮುಕಾಂಬಿಕಾ ದೇವಸ್ಥಾನ ಮಾಜಿ ಅಧ್ಯಕ್ಷರು ಕೃಷ್ಣ ಪೂಜಾರಿ, ಕಿನ್ನಿಗೋಳಿ ಶೇಖರ್ ಕುಂದರ್ ಸೂಪರ್ ಪಾಯಿಂಟ್, ವಿಜಯ ಶೆಟ್ಟಿ ವಕ್ಕೇರಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಪ್ರಾಯೋಜಕರಾದ ಅನಿಲ್ ಶೆಟ್ಟಿ ವಕ್ಕೇರಿ, ಆರ್ಡಿ ಉದಯ ಕೆ. ಶೆಟ್ಟಿ, ಪ್ರಸನ್ನ ಎನ್. ಶೆಟ್ಟಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಪ್ರಶಾಂತ್ ಎನ್. ಶೆಟ್ಟಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಸುರೇಂದ್ರ ಶೆಟ್ಟಿ ಸರ್ಗಮ್, ದಕ್ಷತ್ ಶೆಟ್ಟಿ ಅಸೋಡು ಸೂಪರ್ ಪಾಯಿಂಟ್, ಸುಧೀರ್ ಶೆಟ್ಟಿ ವಂಡ್ಸೆ, ರಘು ಶೆಟ್ಟಿ ಕಾನ್ಕಿ ಉಪಸ್ಥಿತರಿದ್ದರು. ಶಹಾಡ್ ಮುಕಾಂಬಿಕಾ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಿಂಜೆ ಇವರು ಕಾರ್ಯಕ್ರಮ ನಿರೂಪಿಸಿ, ಕವಿ -ಸಾಹಿತಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಕೊನೆಯಲ್ಲಿ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀದೇವಿ ಬನಶಂಕರಿ’ ಎಂಬ ಪೌರಾಣಿಕ ಕಥಾ ಭಾಗದ ಯಕ್ಷಗಾನ ಬಯಲಾಟ ನಡೆಯಿತು.