ಕೋಟ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಪುಟಾಣಿಗಳ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ಯು ದಿನಾಂಕ 15-09-2023ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಎಮ್.ಜಿ.ಎಮ್.ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಜಗದೀಶ ನಾವುಡ “ಯಕ್ಷಗಾನದ ಮೂಲ ಸತ್ವವು ಯಕ್ಷರಂಗದಲ್ಲಿ ವಿರಳವಾಗಿದೆ. ಪೂರ್ವರಂಗ ಪ್ರಾತ್ಯಕ್ಷಿಕೆಯ ಮೂಲಕ ರಂಗದಲ್ಲಿ ಎಳೆ ಎಳೆಯಾಗಿ ಮಕ್ಕಳಿಗೆ ಬಿತ್ತರಿಸುವ ಕಾರ್ಯ ಮಹತ್ತರವಾದದ್ದು. ಯಶಸ್ವೀ ಕಲಾವೃಂದ ಹಲವಾರು ವರ್ಷಗಳಿಂದ ಅತ್ಯುನ್ನತ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಮೆರೆದಿರುವುದನ್ನು ಹತ್ತಿರದಿಂದ ಬಲ್ಲೆವು. ಚಿಣ್ಣರ ಮೂಲಕವೇ ಚಿಣ್ಣರಿಗೆ ಕಲೆಯನ್ನು ಉಣಿಸಿದಾಗ ಹೆಚ್ಚು ಫಲಕಾರಿಯಾಗುವುದರಲ್ಲಿ ಸಂಶಯವಿಲ್ಲ” ಎಂದು ಅಭಿಪ್ರಾಯ ಪಟ್ಟರು.
ಗೌರವ ಉಪಸ್ಥಿತಿಯಲ್ಲಿ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ಭಾಸ್ಕರ ಆಚಾರ್ಯ, ಕೋಟ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿಗಳಾದ ಮಂಜುನಾಥ ಉಪಾಧ್ಯ, ಯಕ್ಷ ಗುರು ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ವಿವೇಕ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸ್ವಾಗತಿಸಿ, ವಿವೇಕ ಬಾಲಕರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಪಾಧ್ಯ ಧನ್ಯವಾದಗೈದರು. ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಚಿಣ್ಣರಿಂದ ಚಿಣ್ಣರಿಗೆ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ರಂಗದಲ್ಲಿ ಪ್ರದರ್ಶನಗೊಂಡಿತು.