ಕೋಟ: ಕೋಟದ ಮಣೂರು ಪಡುಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಸಿ.ಕುಂದರ್ ಸ್ಮಾರಕ ಭವನದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ “ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ” ಕಾರ್ಯಕ್ರಮವು ದಿನಾಂಕ 09-09-2023ರಂದು ನಡೆಯಿತು.
ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಚಾಲನೆ ನೀಡಿದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ “ಯಕ್ಷಗಾನ ಪೂರ್ವರಂಗ ಎನ್ನುವಂತದ್ದು ನಶಿಸಿ ಹೋದ ಕಾಲದಲ್ಲಿ ಯಶಸ್ವೀ ಕಲಾವೃಂದದ ಬಳಗ ಶಾಲೆಗಳಿಗೆ ತೆರಳಿ ಭವಿಷ್ಯದ ರೂವಾರಿ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಎಳೆ ಎಳೆಯಾಗಿ ಹೇಳಿ ಕೊಡುವ ಕಾರ್ಯ ಮಾಡುತ್ತಿದೆ. ಕೋಡಂಗಿಯಿಂದ ಹಿಡಿದು ಪಾಂಡವರ ಒಡ್ಡೋಲಗದ ವರೆಗಿನ ಪೂರ್ವರಂಗದ ಭಾಗವಷ್ಟೇ ಅಲ್ಲದೇ ಕೃಷ್ಣನ ಒಡ್ಡೋಲಗ, ಕಿರಾತ ಒಡ್ಡೋಲಗವನ್ನು ಅಚ್ಚು ಕಟ್ಟಾಗಿ ಚಿಣ್ಣರೇ ರಂಗದಲ್ಲಿ ಅಭಿನಯಿಸಿ, ಶಾಲಾ ಚಿಣ್ಣರಿಗೆ ಮನದಟ್ಟು ಮಾಡುವ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಅವಿರತ ಪ್ರಯತ್ನದಿಂದ ಯಶಸ್ಸು ಸಾಧಿಸಿದ ಸಂಸ್ಥೆ ಯಶಸ್ವೀ ಕಲಾವೃಂದ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿರುವುದು ಶ್ಲಾಘನೀಯ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಉಪಸ್ಥಿತಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡೆನಿಜ್ ಬಾಂಜ್, ಪೋಷಕರಾದ ವೈಷ್ಣವಿ ಕುಂದರ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ನಿರಂಜನ್ ನಾಯಕ್, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಜಯರಾಮ ಶೆಟ್ಟಿ, ನಾಗರಾಜ, ವಾಹಿನಿ ಯುವಕ ಮಂಡಲದ ಅಧ್ಯಕ್ಷರಾದ ರಮೇಶ್ ಕುಂದರ್, ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರಾದ ಶೇಸು ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಮಕ್ಕಳಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ರಂಗದಲ್ಲಿ ಮೂಡಿ ಬಂತು.