ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ದಿನಾಂಕ 06 ಜುಲೈ 2025ರಂದು ಯಕ್ಷಗಾನ ಪ್ರಸಂಗ ರಚನೆ ಕಮ್ಮಟವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಹಿರಿಯ ಯಕ್ಷಕವಿ ಕೀರ್ತಿಶೇಷ ಶಿರೂರು ಪಣಿಯಪ್ಪಯ್ಯರವರ 108ನೇ ಜನ್ಮದಿನದ ಪ್ರಯುಕ್ತ ಇಡೀ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು. ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ಆಶೀರ್ವದಿಸಿ, “ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜೊತೆ ಪ್ರಸಂಗ ರಚನೆ ಕಮ್ಮಟವು ಅಪೂರ್ವವೆನಿಸಿದೆ, ಯಶಸ್ವಿಯಾಗಲಿ” ಎಂದರು.
ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ಇವರು ‘ಫಣಿಗಿರಿ ಪ್ರಶಸ್ತಿ- 2025’ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಉಮೇಶ ಶಿರೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ಯಕ್ಷಗಾನ ಧ್ವನಿಸುರುಳಿಗಳ ಸಂರಕ್ಷಕರಾದ ಶ್ರೀ ಎಂ.ಎಲ್. ಭಟ್ ಮರವಂತೆ ಇವರನ್ನು ಸಿರಿಬಾಗಿಲು ಪ್ರತಿಷ್ಠಾನ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಕಾಸರಗೋಡಿನ ಸಂಶೋಧಕರಾದಂತಹ ಡಾ. ಶಂಕರನಾರಾಯಣ ಭಟ್ ಉಪ್ಪಂಗಳ ಇವರು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಪ್ರಥಮವಾಗಿ ಒಂದು ಲಕ್ಷ ರೂಪಾಯಿಯನ್ನು ದತ್ತಿನಿಧಿಗಾಗಿ ಪೂಜ್ಯ ಎಡನೀರು ಮಠಾಧೀಶರ ಆಶೀರ್ವಾದ ಮೂಲಕ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಸತೀಶ ಅಡಪ್ಪ ಸಂಕಬೈಲು, ಕಮ್ಮಟದ ಮಾರ್ಗದರ್ಶಿಕರಾದ ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಡಾ. ವಸಂತ ಭಾರದ್ವಾಜ್ ಕಬ್ಬಿನಾಲೆ, ಶ್ರೀ ರಾಜಗೋಪಾಲ್ ಕನ್ಯಾನ ಉಪಸ್ಥಿತರಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿ, ಶ್ರೀ ಜಗದೀಶ್ ಕೂಡ್ಲು ನಿರೂಪಿಸಿದರೆ, ಶ್ರೀರಾಜ ಮಯ್ಯ ಸನ್ಮಾನ ಪತ್ರ ವಾಚಿಸಿ, ಕೊನೆಗೆ ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಧನ್ಯವಾದ ಸಮರ್ಪಿಸಿದರು.
ಆ ಬಳಿಕ ಪ್ರಸಂಗ ಕರ್ತರಿಗೆ ಛಂದಸ್ಸಿನ ಮೂಲ ತತ್ವಗಳು, ಪಾರಿಭಾಷಿಕ ಪದಗಳು, ಅಕ್ಷರ ವೃತ್ತ, ಅಂಶ ಬಂಧಗಳು ಈ ಕುರಿತಾದ ಮಾರ್ಗದರ್ಶನವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ನಡೆಸಿಕೊಟ್ಟರು. ಮಾತ್ರ ಬಂಧಗಳು, ಷಟ್ಪದಿಗಳು, ಕಂದ ಪದ್ಯ, ಚಂದೋ ಮಿಶ್ರಣ, ವಿಶಿಷ್ಟ ಪದ್ಯ ಬಂದಗಳ ಕುರಿತಾಗಿ ಹಿರಿಯರಾದ ಶ್ರೀಧರ ಡಿ.ಎಸ್. ಮಾರ್ಗದರ್ಶನವಿತ್ತರು. ಕೊನೆಗೆ ಸೇರಿದ್ದ 25ಕ್ಕೂ ಹೆಚ್ಚು ಪ್ರಸಂಗ ಕರ್ತರಿಂದ ಮುಕ್ತ ಸಂವಾದ ನಡೆಯಿತು.