ಕುಂದಾಪುರ : ಸೀತಾಲಕ್ಷ್ಮೀ ಮತ್ತು ಬಿ.ಎಮ್.ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ ಬೀಜಾಡಿಯಲ್ಲಿ ದಿನಾಂಕ 09-09-2023ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರಿಂದ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವ ಮೂಲಕ ಮರುಚಾಲನೆ ಮಾಡಿ ಮಾತನ್ನಾಡಿದ ಬೀಜಾಡಿ ಶೇಷಗಿರಿ ಗೋಟ “ಎಳೆವೆಯಲ್ಲಿ ಯಕ್ಷಗಾನದ ಆಟ ಆಡಿದ್ದು ನೆನಪಾಗುತ್ತಿದೆ. ಯಕ್ಷಗಾನದಿಂದಲೇ ಹಳ್ಳಿಯಲ್ಲಿ ಸಂಸ್ಕೃತಿ ಉಳಿದಿದೆ. ಪ್ರಾಚೀನ ಕಲೆಯಾದ ಯಕ್ಷಗಾನ ಪಾಶ್ಚಾತ್ಯ ದೇಶಗಳಲ್ಲೂ ಹೆಸರು ಮಾಡಿದೆ. ಯಕ್ಷಗಾನ ವಿದ್ಯಾಭ್ಯಾಸಕ್ಕೂ ಪೂರಕ. ಇಂತಹ ಕಲೆಯನ್ನು ಬೆಳೆಸಿ, ತಲೆಯಲ್ಲಿ ಹೊತ್ತು ಅಳಿದ ಭಾಗಕ್ಕೆ ಪುನಃಶ್ಛೇತನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಸಾಧಿಸುತ್ತಿರುವುದು ಯೋಗ್ಯ ಬೆಳವಣಿಗೆ. ಮಕ್ಕಳಿಗೆ ಕಲಿಸಿ, ಮಕ್ಕಳಿಂದಲೇ ಮಕ್ಕಳಿಗಾಗಿ ಶಾಲೆಗಳಲ್ಲಿ ಪ್ರದರ್ಶಿಸುವ ಕಾರ್ಯ ಸ್ತುತ್ಯರ್ಹ” ಎಂದರು.
“ಕಾರ್ಯಕ್ರಮದ ಹಿಂದಿನ ಖರ್ಚುಗಳಿಂದೊಡಗೂಡಿದ ತಯಾರಿಯೊಂದಿಗೆ ಜಿಲ್ಲೆಯ ಐದು ಶಾಲೆಗಳಲ್ಲಿ ಉಚಿತವಾಗಿ ಯಾವುದೇ ಸಂಸ್ಥೆಗೆ ಹೊರೆ ಆಗದ ಹಾಗೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಅದ್ಭುತ ಕಾರ್ಯ” ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದ ಅಭಿಪ್ರಾಯಪಟ್ಟರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಟಿ. ನಾಯ್ಕ, ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸಂಸ್ಥೆಯ ಸದಸ್ಯ ಲೋಹಿತ್ ಕೊಮೆ ಉಪಸ್ಥಿತರಿದ್ದರು. ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವೀ ಕಲಾವೃಂದದ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ರಂಗದಲ್ಲಿ ಪ್ರದರ್ಶನಗೊಂಡಿತು.

