ಹೊನ್ನಾವರ : ಹಿರಿಯ ಸಾಹಿತಿ ಪತ್ರಕರ್ತ ಮತ್ತು ಸಾಂಸ್ಕೃತಿಕ ನೇತಾರ ಎಲ್.ಎಸ್.ಶಾಸ್ತ್ರಿ ಅವರು ಬರೆದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ರಂಗಚಿಂತನೆಗಳ “ಯಕ್ಷಗಾನ ರಂಗಪ್ರಜ್ಞೆ” ಪುಸ್ತಕದ ಬಿಡುಗಡೆ ಸಮಾರಂಭವು ದಿನಾಂಕ 21-10-2023ರಂದು ಗುಣವಂತೆಯ ಶಿವರಾಮ ಹೆಗಡೆ ರಂಗವೇದಿಕೆಯಲ್ಲಿ ನಡೆಯಿತು.
ಮಹಾಬಲರ 14ನೇ ಮತ್ತು ರಾಮ ಹೆಗಡೆಯವರ 4ನೇ ಸಂಸ್ಮರಣಾ ದಿನದ ಅಂಗವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ ಮತ್ತು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಖ್ಯಾತ ಅರ್ಥಧಾರಿ, ಕಲಾಚಿಂತಕ, ಪ್ರಸಂಗಕರ್ತ ಹಾಗೂ ಸಾಹಿತಿಯಾದ ಡಿ.ಎಸ್.ಶ್ರೀಧರ ಕಿನ್ನಿಗೋಳಿ ಮಾತನಾಡಿ “ಮಹಾಬಲ ಹೆಗಡೆಯವರು ತಾವೇ ಪಾತ್ರವಾಗುತ್ತಿದ್ದರು. ಆ ಸಿದ್ಧಿ ಅವರಂತೆ ಬೇರೆ ಯಾವ ಕಲಾವಿದರಿಗೂ ಸಾಧ್ಯವಾಗಿಲ್ಲ, ಆಗಲಾರದು. ಏಕೆಂದರೆ ಅವರು ಪಾತ್ರವನ್ನು ಪೂರ್ತಿ ತಮ್ಮ ಮೈಗೆ ಆಹ್ವಾನಿಸಿಕೊಳ್ಳುತ್ತಿದ್ದರು. ಅದರ ಹಿಂದೆ ಅವರ ಆಳ ಅಧ್ಯಯನ ಮತ್ತು ರಂಗಪ್ರಜ್ಞೆಯ ಕಲ್ಪನೆ ಕೆಲಸ ಮಾಡುತ್ತಿತ್ತು. ಮಹಾಬಲರು ಕೇವಲ ಕಲಾವಿದರು ಮಾತ್ರವಲ್ಲ, ಕಲಾಪ್ರೇಮಿಗಳನ್ನು ಹಾಗೂ ಕಲಾಸಕ್ತರನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಪಡೆದಿದ್ದರೆಂಬುದೊಂದು ವಿಸ್ಮಯ. ಎಲ್.ಎಸ್. ಶಾಸ್ತ್ರಿಯವರಲ್ಲದೇ ಮಹಾಬಲರ ಬಗ್ಗೆ ಇಂತಹ ಸಮಗ್ರ ಕೃತಿಯನ್ನು ರಚಿಸಲಾರರೆಂಬುದು ತಮ್ಮ ಭಾವನೆ. ಇದು ಕಲಾಸಕ್ತರಿಗೆಲ್ಲ ಅಧ್ಯಯನಯೋಗ್ಯ ಕೃತಿ” ಎಂದು ಹೇಳಿದರು.
ತಾಳಮದ್ದಳೆ ಅರ್ಥಧಾರಿ, ಅಂಕಣಕಾರ , ಚಿಂತಕ ನಾರಾಯಣ ಯಾಜಿ ಸಾಲೇಬೈಲ ಅವರು ಕೃತಿಯ ಪರಿಚಯ ಮಾಡುತ್ತಾ “ರಂಗಪ್ರಜ್ಞೆ ಇಲ್ಲದವನು ಕಲಾವಿದನೇ ಆಗಲಾರ. ಕಲಾವಿದನಿಗೆ ರಂಗಭೂಮಿಯ ಸುತ್ತ ನಡೆಯುವ ಎಲ್ಲ ವ್ಯವಹಾರಗಳ ಸರಿ ತಪ್ಪು ಪ್ರಜ್ಞೆ ಇರಬೇಕೆಂಬುದು ಮಹಾಬಲರ ಆಶಯವಾಗಿತ್ತು ಮತ್ತು ಸ್ವತಃ ಅವರು ಅದನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಕ್ಷಗಾನಕ್ಕೆ ಮಹಾ ಬಲ ತಂದಂತಹ ಮಹಾನ್ ಕಲಾವಿದನನ್ನು ಅಷ್ಟೇ ಸಮರ್ಥವಾಗಿ ಚಿತ್ರಿಸಿ ಅವರ ರಂಗಜೀವನ, ಬದುಕು ಮತ್ತು ವ್ಯಕ್ತಿತ್ವವನ್ನು ನಮ್ಮೆದುರಿಗಿಟ್ಟಿರುವ ಶಾಸ್ತ್ರಿಯವರಿಗೂ ಅಭಿನಂದನೆಗಳು ಸಲ್ಲಬೇಕು.” ಎಂದರು.
ಗ್ರಂಥ ಕರ್ತೃ ಎಲ್. ಎಸ್. ಶಾಸ್ತ್ರಿಯವರು ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ “ಮಹಾಬಲರೊಡನೆ ತಮಗಿದ್ದ ಆತ್ಮೀಯ ಒಡನಾಟ ಮತ್ತು ಅವರನ್ನು ಕಲಾವಿದರಾಗಿಯಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಅರಿತು, ಚರ್ಚಿಸಿ, ಅಭ್ಯಸಿಸಿದ ನಂತರವೇ ಈ ಕೃತಿ ಬರೆಯುವುದು ಸಾಧ್ಯವಾಗಿದೆ. ಯಕ್ಷಗಾನ ಕಲೆಯೊಡನೆ ತಾದಾತ್ಮ್ಯಗೊಂಡ ಜೀವ ಅದು. ಕೊನೆಯವರೆಗೂ ಅವರು ಈ ಕಲೆಯ ಹಿತಚಿಂತನೆ ನಡೆಸಿದರು ಮತ್ತು ಕಲೆಯಲ್ಲಿ ಸು-ಧೋರಣೆಯ ಸುಧಾರಣೆ ತರಬೇಕೇ ಹೊರತು ಬದಲಾವಣೆ ಅಲ್ಲ. ಎರಡಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಇಂದಿನ ಅಜ್ಞ ಪ್ರೇಕ್ಷಕ ಗಣ ಅರಿಯಬೇಕೆಂದು ಪ್ರತಿಪಾದಿಸಿದವರು” ಎಂದು ಹೇಳಿದರು. ಯಕ್ಷಗಾನದ ಖ್ಯಾತ ಕಲಾವಿದ ಶಿವಾನಂದ ಹೆಗಡೆ ಕೆರೆಮನೆಯವರು ತಮ್ಮ ಕಲಾರಂಗದ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಹಿರಿಯ ಭಾಗವತರಾದ ಇಡುವಾಣಿ ತ್ರ್ಯಂಬಕ ಹೆಗಡೆ ಅವರಿಗೆ ಮಹಾಬಲ ಪ್ರಶಸ್ತಿ ನೀಡಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಶೈಲಿಯ ಗಣಪತಿಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನದ ಪರವಾಗಿ ಶಶಾಂಕ ಹೆಗಡೆ ಸ್ವಾಗತಿಸಿ, ಕಾರ್ಯದರ್ಶಿ ಎಲ್. ಎಂ. ಹೆಗಡೆ ನಿರೂಪಿಸಿ, ಕಿಶೋರ ಹೆಗಡೆ ವಂದಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷೆ ನಾಗವೇಣಿ ಹೆಗಡೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಶಾಂಕ, ಕಿಶೋರ ಹೆಗಡೆ ಮತ್ತು ಶಿವರಾಮ ಹೆಗಡೆ ಬಳಗದವರಿಂದ “ಭೀಷ್ಮ ವಿಜಯ” ಕಥಾಭಾಗ ಯಕ್ಷಗಾನ ಕಲಾಪ್ರದರ್ಶನ ನೆರವೇರಿತು. ಕೆರೆಮನೆ ಮಹಾಬಲ ಹೆಗಡೆ ಕುಟುಂಬ ಮತ್ತು ಬಂಧು ಬಳಗದವರು ಅಸಂಖ್ಯಾತ ಕಲಾಭಿಮಾನಿಗಳು ಭಾಗವಹಿಸಿದ್ದರು. ಗಣೇಶ ಶಾಸ್ತ್ರಿ ನೀಲೇಕೇರಿ, ಎನ್. ಎಂ. ಭಟ್ಟ, ಸಚ್ಚಿದಾನಂದ ಹೆಗಡೆ ಮತ್ತಿತರರು ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು.
ಪುಸ್ತಕ ದೊರಕುವ ಸ್ಥಳ:
ಎಲ್. ಎಸ್. ಶಾಸ್ತ್ರಿ
ಸೋಮನಾಥ ಅಪಾರ್ಟಮೆಂಟ್
3ನೇ ಕ್ರಾಸ್ ಭಾಗ್ಯನಗರ
ಬೆಳಗಾವಿ-590006
ಸಂಪರ್ಕ ಸಂಖ್ಯೆ – 9482251696 ,
ಶ್ರೀಮತಿ ನಾಗವೇಣಿ ಆರ್. ಹೆಗಡೆ
ಕೆರೆಮನೆ
ಅಂಚೆ ಗುಣವಂತೆ
ತಾ. ಹೊನ್ನಾವರ ( ಉತ್ತರ ಕನ್ನಡ ಜಿಲ್ಲೆ)
ಸಂಪರ್ಕ ಸಂಖ್ಯೆ – 9972383796