ಮಂಗಳೂರು : ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಸ್ಮಾರಕ ಸಮಿತಿಯು ಆಯೋಜಿಸಿದ ಗೌರವಾರ್ಪಣೆ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮ ಜೊತೆಗೆ ದಿನಾಂಕ 26-12-2023ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕರಾದ ಡಾ. ಪ್ರಭಾಕರ್ ಜೋಶಿ ಹಾಗೂ ಸುಚೇತಾ ಜೋಶಿ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ “ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಸಂಚಾಲಕ ಡಾ. ಎಂ. ಪ್ರಭಾಕರ ಜೋಶಿ ಅವರು ಬಹುಮುಖ ಪ್ರತಿಭಾ ಸಂಪನ್ನರಾಗಿ ಯಕ್ಷಗಾನ ಮಕರಂದವೆಂಬ ಬೃಹತ್ ಸಂಸ್ಮರಣಾ ಗ್ರಂಥದ ಸಂಪಾದಕತ್ವದಲ್ಲಿ ಶ್ರಮವಹಿಸಿ ಒಂದು ದಾಖಲೆ ಗ್ರಂಥವನ್ನಾಗಿ ರೂಪಿಸಿ ಶಾಸ್ತ್ರಿಗಳ ಹೆಸರನ್ನು ಚಿರಂತನಗೊಳಿಸಿದ್ದಾರೆ.”ಎಂದರು
ಗೌರವ ಸ್ವೀಕರಿಸಿದ ಡಾ. ಜೋಶಿ ಮಾತನಾಡಿ “ತಾಳಮದ್ದಳೆ ಪ್ರವಚನ ಕ್ಷೇತ್ರಕ್ಕೆ ಪೊಳಲಿ ಶಾಸ್ತ್ರಿಯವರ ಕೊಡುಗೆ ಅಸಾಮಾನ್ಯವಾದುದು. 1930-70 ಅವಧಿಯಲ್ಲಿ ಶಾಸ್ತ್ರಿಗಳು ತಮ್ಮ ಅಮೋಘ ಸೇವೆಯಿಂದ ಸ್ಮರಣೀಯರಾಗಿರುವರು. ತಾಳಮದ್ದಲೆಯ ನವೋದಯದ ನೇತಾರರಲ್ಲಿ ಶಾಸ್ತ್ರಿಯವರೂ ಒಬ್ಬರು. ಈ ವರೆಗೆ 36 ಮಂದಿ ಅರ್ಹ ಕಲಾವಿದರನ್ನು ಶಾಸ್ತ್ರಿ ಸಮಿತಿಯು ಗೌರವಿಸಿರುವುದು ಹೆಮ್ಮೆಯ ಸಂಗತಿ. ಗೌರವಾರ್ಪಣೆಯೊಂದಿಗೆ ತನಗೆ ನೀಡಿರುವ ನಿಧಿಯನ್ನು ಕನ್ನಡ ಶಾಲೆ ಉಳಿಸಿ-ಬೆಳೆಸಿ ಎಂಬ ನೆಲೆಯಲ್ಲಿ ತಾನು ಕಲಿತ ಶಾಲೆಗೆ ನೀಡುತ್ತೇನೆ.” ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅತಿಥಿಯಾಗಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾವಿದ ಸೇರಾಜೆ ಸೀತಾರಾಮ ಭಟ್ಟರು ಅಭಿನಂದನ ಭಾಷಣಗೈದರು, ದೇವಸ್ಥಾನದ ಆಡಳಿತ ಮೊಕೇಸರ ಕೃಷ್ಣ ಹೆಬ್ಬಾರ್, ವಾಸುದೇವ ಹೆಬ್ಬಾರ್, ಯಕ್ಷಗಾನ ಸಂಘದ ಸಂಚಾಲಕ ವಾಸುದೇವ ಆಚಾರ್ ಉಪಸ್ಥಿತರಿದ್ದರು. ಶಿವರಾಮ ಪಣಂಬೂರು ಸಮ್ಮಾನ ಪತ್ರ ವಾಚಿಸಿ, ಸದಸ್ಯ ಪರಮೇಶ್ ಕಾರ್ಯಕ್ರಮ ನಿರೂಪಿಸಿ, ಶಾಸ್ತ್ರಿ ಸಮಿತಿ ಕಾರ್ಯದರ್ಶಿ ಪೊಳಲಿ ನಿತ್ಯಾನಂದ ಕಾರಂತ ವಂದಿಸಿದರು. ಬಳಿಕ ‘ಆಂಗದ ಸಂಧಾನ’ ತಾಳಮದ್ದಳೆ ನಡೆಯಿತು.