ಬೆಳ್ತಂಗಡಿ : ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ದಿನಾಂಕ 23 ಸೆಪ್ಟೆಂಬರ್ 2024ರಂದು ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆಯ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ‘ಯಕ್ಷಾವತರಣ -5’ ಮತ್ತು ‘ಯಶೋ’ ಯಕ್ಷ ನಮನ ಗಾನ-ನೃತ್ಯ-ಚಿತ್ರ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ, ವಿಮರ್ಶಕ ಡಾ. ಪ್ರಭಾಕರ ಜೋಶಿ ಇವರು ಮಾತನಾಡಿ “ತೆಂಕು-ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ-ಮದ್ದಳೆ ವಾದನವನ್ನು ಅಳವಡಿಸಿಕೊಂಡು, ಸರಳ ಬದುಕು ವ್ಯಕ್ತಿತ್ವ, ತ್ಯಾಗಶೀಲತೆಯಿಂದ ಶ್ರೇಷ್ಠ ಕಲಾವಿದರಾಗಿ ನೆಡ್ಲೆನರಸಿಂಹ ಭಟ್ ಪರಿಪೂರ್ಣ ಅಧ್ಯಾಪಕರಾಗಿ ಪ್ರಾತಃಸ್ಮರಣೀಯರು. ರಸಭಾವಪೂರ್ಣವಾಗಿ ಚೆಂಡೆ ನುಡಿಸಿ ಎಲ್ಲರಿಗೂ ಗುರುಗಳಾಗಿ ಕುಲಪತಿಯಂತೆ ಮಾರ್ಗದರ್ಶನ ನೀಡಿ ಶಿಷ್ಯಗಡಣವನ್ನೇ ಸೃಷ್ಟಿಸಿದವರು. ಯಕ್ಷಾವತರಣ ಮೂಲಕ ಅವರನ್ನು ಕುರಿಯ ಪ್ರತಿಷ್ಟಾನ ಸಂಸ್ಮರಿಸುತ್ತಿರುವುದು ಔಚಿತ್ಯಪೂರ್ಣ” ಎಂದು ನುಡಿದರು.
ಸಪ್ತಾಹವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು “ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನ ಕಲಾವಿದರು ಹಾಗೂ ಪೋಷಕರ ನೆರವಿನಿಂದ ಉತ್ತಮ ಗುಣಮಟ್ಟದ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದು, ಸಂಚಾಲಕ ಉಜಿರೆ ಅಶೋಕ ಭಟ್ ಅವರು ಅರ್ಥಧಾರಿಗಳಾಗಿ, ವಾಗ್ಮಿಯಾಗಿ, ಅದ್ಭುತ ಸಂಘಟಕರಾಗಿ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅಗಲಿದ ಡಾ. ಯಶೋವರ್ಮ ಅವರ ಸಾಕ್ಷಿಪ್ರಜ್ಞೆಯಾಗಿ ‘ಯಕ್ಷ ಯಶೋ ನಮನ’ ಸಂಸ್ಮರಣೆ ಆಯೋಜಿಸುತ್ತಿರುವುದು ಶ್ಲಾಘನೀಯ. ಕುರಿಯ ಪ್ರತಿಷ್ಠಾನದ ಕಲಾ ಸೇವೆ ನಿರಂತರವಾಗಿ ಮುನ್ನಡೆಸಲು ದೇವರ ಅನುಗ್ರಹವಿರಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ರಾವ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್ ಕಕ್ಕೇನೇಜಿ, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು. ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿ, ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಳಮದ್ದಳೆ ಸಪ್ತಾಹದ ಮೊದಲ ದಿನದ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದರಿಂದ ‘ಭೀಷ್ಮ ಪರ್ವ’ ಕಥಾಭಾಗದ ತಾಳಮದ್ದಳೆ ನಡೆಯಿತು.