ಕಾಪು : ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆದ ತೃತೀಯ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ-2023 ಕಾರ್ಯಕ್ರಮವು ದಿನಾಂಕ 31-12-2023ರಂದು ಸಂಪನ್ನಗೊಂಡಿತು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಯಕ್ಷಗಾನ ಸಪ್ತಾಹ 2023ರ ಉದ್ಘಾಟನೆಯನ್ನು ದಿನಾಂಕ 25-12-023ರಂದು ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನೆರವೇರಿಸಿದ್ದರು.
ಬಳಿಕ ಆಶೀರ್ವಚನ ನೀಡಿದ ಗುರುಗಳು “ಮಹಾಸಂಸ್ಥಾನದಿಂದ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಸದುದ್ದೇಶದೊಂದಿಗೆ ಹೊಸ ತಲೆಮಾರಿನಲ್ಲಿ ಕಲೆಗಳ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ, ಅಧ್ಯಯನ ಮತ್ತು ಅವುಗಳನ್ನು ಮುನ್ನಡೆಸುವ ಅಭಿರುಚಿ ಸೃಷ್ಟಿಸುವ ಗುರಿಯೊಂದಿಗೆ ಕಲೆ, ಸಾಹಿತ್ಯ ಹಾಗೂ ಕ್ರೀಡಾ ರಂಗಗಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಯೋಜನೆಯನ್ನು ಮಹಾಸಂಸ್ಥಾನದ ವತಿಯಿಂದ ನಡೆಸಲಾಗುವುದು” ಎಂದರು.
ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್, ಉದ್ಯಮಿ ಜಯ ಕೆ. ಶೆಟ್ಟಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ ಹಾಗೂ ಯಕ್ಷಗಾನ ಕಲಾಪೋಷಕ ವಿಶು ಕುಮಾರ್ ಉಚ್ಚಿಲ ಉಪಸ್ಥಿತರಿದ್ದರು. ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಟಿ. ಆಚಾರ್ಯ ಮುಂಬೈ ದಿಕ್ಕೂಚಿ ಭಾಷಣ ಮಾಡಿ, ಲೋಕೇಶ್ ಎಂ.ಬಿ. ಆಚಾರ್ ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ಶ್ರೀ ಜನಾರ್ದನ ಆಚಾರ್ಯ ಕನ್ಯಾನ ವಂದಿಸಿದರು.
ದಿನಾಂಕ 31-12-2023ರ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕಾಡಬೆಟ್ಟು ನಾಗರಾಜ ಆಚಾರ್ಯ ವಹಿಸಿದ್ದರು. ಇದೇ ವೇಳೆ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ವಾಸುದೇವ ರಾವ್ ಸುರತ್ಕಲ್, ರುದ್ರಯ್ಯ ಆಚಾರ್ಯ ಸಾಹೇಬರಕಟ್ಟೆ, ಸದಾಶಿವ ಆಚಾರ್ಯ ಬೈಲೂರು, ಶಂಕರ ಆಚಾರ್ಯ ಕೊಳ್ಯೂರು , ಭಾಸ್ಕರ್ ಜಿ. ಪೂಜಾರಿ ಕಟಪಾಡಿ, ರಾಘು ಎಸ್. ಗುಜರನ್ ಉಚ್ಚಿಲ ಹಾಗೂ ವಾಮನ ಆಚಾರ್ಯ ಬೋವಿಕ್ಕಾನ ಕಾಸರಗೋಡು ಅವರಿಗೆ ಗೌರವಾರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸಮಾಜ ಸೇವಕ ಹಾಗೂ ಯಕ್ಷಗಾನ ಕಲಾ ಪೋಷಕ ಎಂ. ಮಿಥುನ್ ರೈ ಮಂಗಳೂರು, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಹಾಗೂ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಅಧ್ಯಕ್ಷ ಕೇಶವ ಶರ್ಮಾ ಇರುವೈಲು ಉಪಸ್ಥಿತರಿದ್ದರು.
ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಟಿ. ಆಚಾರ್ಯ ಮುಂಬೈ ದಿಕ್ಕೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಸಂಯೋಜಕ ಜನಾರ್ದನ ಆಚಾರ್ಯ ಕನ್ಯಾನ ವಂದಿಸಿದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ನಿರೂಪಿಸಿದರು.