ಹರೇಕಳ : ಯಕ್ಷಧ್ರುವ ಫೌಂಡೇಶನ್ ( ರಿ.) ಮಂಗಳೂರು ವತಿಯಿಂದ ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ತರಗತಿಯು ದಿನಾಂಕ 04-07-2024ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮುಡಿಪು ಘಟಕದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ಪ್ರತಿಯೊಬ್ಬರು ಕೂಡ ಕಲಿತ ವಿದ್ಯಾಸಂಸ್ಥೆ ಕಲಿಸಿದ ಗುರುಗಳು, ಹೆತ್ತ ತಂದೆ ತಾಯಿ, ಹೊತ್ತ ನಾಡು ಇದನ್ನು ಮರೆಯಲೇಬಾರದು. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವಾಗ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತನ್ನನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ. ಇದರಿಂದ ಮುಂದಕ್ಕೆ ಉತ್ತಮ ನಾಯಕರಾಗಿ ಮೂಡಿ ಬರಬಹುದು. ಯಕ್ಷಧ್ರುವ ಫೌಂಡೇಶನ್ ನವರು ಈ ಸೇವೆಯನ್ನು ಕಳೆದ 9 ವರ್ಷಗಳಿಂದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಧ್ರುವ ಫೌಂಡೇಶನ್ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಆಳ್ವ ಕದ್ರಿ ಇವರು ಮಾತನಾಡಿ ನಾಟ್ಯ, ಅರ್ಥಗಾರಿಕೆ, ವೇಷಭೂಷಣ, ಅಭಿನಯ, ಹಾಡುಗಾರಿಕೆ, ಹಿಮ್ಮೇಳ ಹೀಗೆ ಹತ್ತು ಹಲವು ವಿಚಾರಗಳನ್ನು ಕಲಿಯಬಹುದಾದ ಏಕೈಕ ಕಲೆ ಅಂದ್ರೆ ಅದು ಯಕ್ಷಗಾನ. ವಿದ್ಯಾರ್ಥಿಗಳು ಎಳವೆಯಲ್ಲೇ ಯಕ್ಷ ಶಿಕ್ಷಣವನ್ನು ಪಡೆದುಕೊಂಡಾಗ ಸಂಸ್ಕಾರ ವೃದ್ಧಿಯಾಗುತ್ತದೆ ಮತ್ತು ಪುರಾಣದ ಪರಿಚಯವಾಗುತ್ತದೆ. ಈ ಎಲ್ಲಾ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು. ಈ ಶೈಕ್ಷಣಿಕ ವರ್ಷ ಸುಮಾರು 50ಕ್ಕೂ ಹೆಚ್ಚು ಶಾಲೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣ ತರಬೇತಿಯನ್ನು ಯಕ್ಷ ಧ್ರುವ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಯಕ್ಷಗಾನ ಗುರುಗಳಾದ ಶ್ರೀ ಅಶ್ವಥ್ ಮಂಜಿನಾಡಿ, ಗೌರವ ಉಪಸ್ಥಿತಿಯಾಗಿ ಶಾಲಾ ಸಂಚಾಲಕರಾದ ಕಡೆಂಜ ಶ್ರೀ ಸೋಮಶೇಖರ್ ಚೌಟ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ , ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಶ್ರೀ ಪ್ರದೀಪ್ ಆಳ್ವ, ಸಾಮಾಜಿಕ, ಧಾರ್ಮಿಕ ಮುಂದಾಳು ಹಾಗೂ ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರು, ಯಕ್ಷಗಾನ ಗುರುಗಳಾದ ಶ್ರೀ ಅಶ್ವಥ್ ಮಂಜಿನಾಡಿ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ತ್ಯಾಗಮ್ ಹರೇಕಳ ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ರವಿಶಂಕರ್ ಧನ್ಯವಾದವಿತ್ತರು. ಶಿಕ್ಷಕರಾದ ಶ್ರೀ ಕೃಷ್ಣ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರುಗಳಾದ ಶ್ರೀಮತಿ ಕುಮುದ, ಶ್ರೀ ಶಿವಣ್ಣ, ಶ್ರೀಮತಿ ಸ್ಮಿತಾ ಇವರುಗಳು ಸಹಕರಿಸಿದರು.