ಬಂಟ್ವಾಳ : ಫರಂಗಿಪೇಟೆ ಅರ್ಕುಳದ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಟ ಫೌಂಡೇಷನ್ ವತಿಯಿಂದ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿನಾಂಕ 22-06-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಇವರು ಮಾತನಾಡಿ “ಯಕ್ಷಶಿಕ್ಷಣ ತರಗತಿಯಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಅದು ಮಕ್ಕಳ ಶಿಕ್ಷಣಕ್ಕೂ ಪೂರಕವಾಗಿ ಪರಿಣಮಿಸುತ್ತದೆ” ಎಂದು ಹೇಳಿದರು.
ಯಕ್ಷ ಶಿಕ್ಷಣ ತರಗತಿಯ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳಬೀಡು ವಜ್ರನಾಭ ಶೆಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ.ಕೆ. ಜಯರಾಮ ಶೇಕ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಯಕ್ಷ ತರಗತಿ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.
ಶಾಲಾ ಸಂಚಾಲಕ ಎ. ಗೋವಿಂದ ಶೆಣೈ, ಯಕ್ಷ ತರಗತಿ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ, ರೋಟರಿ ಸದಸ್ಯರಾದ ರಮೇಶ್ ಶೆಟ್ಟಿ ನಡಿಗುತ್ತು, ರಮೇಶ್ ತುಂಬೆ, ಜಯಶೀಲ ಅಡ್ಯಂತಾಯ ಉಪಸ್ಥಿತರಿದ್ದರು. ಯಕ್ಷ ಧ್ರುವ ಯಕ್ಷ ತರಗತಿಯ ಪ್ರಧಾನ ಸಂಚಾಲಕ ವಾಸುದೇವ ಐತಾಳ ಪ್ರಸ್ತಾವನೆಗೈದರು. ಶಾಲಾ ಮುಖ್ಯಸ್ಥ ಕೆ.ಆರ್. ದೇವದಾಸ್ ಸ್ವಾಗತಿಸಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಜಯ ಕುಮಾರ್ ವಂದಿಸಿದರು. ಭುವನೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.