ಕರ್ನೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 4 ಸೆಪ್ಟೆಂಬರ್ 2024ರಂದು ನೆರವೇರಿತು.
ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಕಾರ್ಯದರ್ಶಿ ಚಂದ್ರಹಾಸ್ ರೈ ಮಾಡಾವು ಇವರು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಟ್ಲ ಫೌಂಡೇಶನ್ ಯಾವ ರೀತಿ ಲೋಕಪರಿಚಯವಾಯಿತು, ಬೆಳೆದು ಬಂದು ಕಲಾಭಿಮಾನಿಗಳ ಜೊತೆ ಹೇಗೆ ಒಗ್ಗೂಡಿತು, ಸಾವಿರಾರು ಯಕ್ಷಗಾನ ಪ್ರಿಯರ ಬಾಳು ಉಜ್ವಲಗೊಳಿಸಿದ ಚರಿತ್ರೆಯನ್ನು ಇಂದಿನ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. ಪ್ರಶಾಂತ್ ರೈ ಮುಂಡಾಲ ಗುತ್ತು ಉಪನ್ಯಾಸಕರು ಸಂತ ಫಿಲೋಮಿನ ಕಾಲೇಜು ಪುತ್ತೂರು ಹಾಗೂ ಸಂಚಾಲಕರು ಪಟ್ಲ ಫೌಂಡೇಶನ್ ಪುತ್ತೂರು ಘಟಕ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶ್ರೀರಾಮ ಪಕ್ಕಳ ಇವರು ಮಾತನಾಡಿ “ಯಕ್ಷಗಾನ ಅನ್ನೋದು ಈ ಮಣ್ಣಿನಲ್ಲೇ ರಾರಾಜಿಸುತ್ತಿದೆ. ಕರ್ನೂರು ಶ್ರೀ ಕೊರಗಪ್ಪ ರೈ ಇವರ ನೆಲೆಯ ಸೊಗಡನ್ನು ಲೋಕಕ್ಕೆ ಪರಿಚಯಿಸುವ ಇನ್ನೊಂದು ಮಹತ್ಕಾರ್ಯ ಈ ಒಂದು ಕಾರ್ಯಕ್ರಮದಲ್ಲಿ ಸಂಪೂರ್ಣತೆಯನ್ನು ಹೊಂದಲಿ. ಇನ್ನು ಸ್ವಲ್ಪ ವರ್ಷಗಳಲ್ಲಿ ಲೋಕಪರಿಚಿತವಾಗಲಿ ಹಾಗೆ ಇಲ್ಲಿ ಆರಂಭಗೊಂಡಂತಹ ಎಲ್ಲಾ ಕಾರ್ಯಕ್ರಮಗಳೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲಿ. ಕಾರ್ಯಕ್ರಮಗಳ ಎಲ್ಲಾ ಒಗ್ಗೂಡುವಿಕೆ ಎಂದರೆ ಅದು ಕರ್ನೂರು ಶಾಲೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಕ್ರೀಡಾ ಕ್ಷೇತ್ರದಲ್ಲಿ, ಕಲೆಯಲ್ಲಿ ಒಂದಾಗಿರುವುದು. ಇಂದು ಗಂಡುಕಲೆ ಯಕ್ಷಗಾನ ಅದರಲ್ಲಿಯೂ ದೇಶವಿದೇಶಗಳಲ್ಲಿ ಹೆಸರನ್ನು ಗಳಿಸಿದಂತಹ ಪಟ್ಲ ಫೌಂಡೇಶನ್ ಇವತ್ತು ಕನ್ನಡ ಶಾಲೆಯಲ್ಲಿ ಪ್ರಾರಂಭವಾಗುತ್ತಿರುವುದು ನಮ್ಮ ಊರಿನ ಹೆಮ್ಮೆಯೇ ಸರಿ” ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಿ.ಎಚ್. ಸೂಫಿ ಇವರು ಕಾರ್ಯಕ್ರಮದ ಕುರಿತು “ಯಕ್ಷಗಾನ ನಮ್ಮ ಶಾಲೆಗೆ ಒಲಿದು ಬಂದ ಭಾಗ್ಯ ಇನ್ನಷ್ಟು ಅವಕಾಶಗಳು ಒದಗಿ ಬರಲಿ. ಮಕ್ಕಳ ಆಸಕ್ತಿಗೆ ಈ ಒಂದು ಕಾರ್ಯಕ್ರಮ ದಾರಿದೀಪವಾಗಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಶ್ರೀ ಜಯರಾಮ್ ಪಾಟಾಳಿ ಪಡುಮಲೆ ಇವರು ಕಾರ್ಯಕ್ರಮ ಕುರಿತು ಸಾರ್ಥಕತೆಯ ಮಾದರಿಗಳನ್ನು ಮುಂದಿಡುತ್ತ ಮಕ್ಕಳ ಮುಂದಿನ ಯಕ್ಷಯಾನದ ಭದ್ರ ಬುನಾದಿಯ ಚಿತ್ರಣವನ್ನು ವಿವರಿಸುತ್ತ ಕ್ಷಣವನ್ನು ಸಂಪನ್ನಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೆಟ್ಟಣಿಗೆ ಮುಡ್ನೂರು ಗ್ರಾ ಪಂ.ಸದಸ್ಯರಾದ ಶ್ರೀ ಕುಮಾರ್ ನಾಥ ಪೂಜಾರಿ, ಶ್ರೀಮತಿ ಪ್ರಫುಲ್ಲಾ ರೈ ಹಾಗೂ ಶ್ರೀ ಪ್ರದೀಪ್ ರೈ, ಯಕ್ಷಗಾನ ಅಭಿಮಾನಿಗಳಾದ ಶ್ರೀ ಸುಭಾಶ್ಚಂದ್ರ ರೈ ಮೈರೋಳು, ಶ್ರೀ ಸುಭೋಧ್ ರೈ ಮತ್ತು ಕರ್ನೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ರೈ ಮೂರ್ತಿಮಾರು ಇವರು ಉಪಸ್ಥಿತರಿದ್ದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು, ಊರಿನವರು ಭಾಗಿಯಾಗಿ ಕಾರ್ಯಕ್ರಮವನ್ನು ಚಂದಗಾಣಿಸುವಲ್ಲಿ ಯಶಸ್ವಿಯಾದರು. ಶಾಲೆಯ ಪುಟಾಣಿ ಮಕ್ಕಳು ಶಿಸ್ತಿನ ಸರದಾರರಾಗಿ ಕಾರ್ಯಕ್ರಮ ಸುವ್ಯವಸ್ಥಿತವಾಗಿ ಸಮಾಪ್ತಿಗೊಳ್ಳುವಲ್ಲಿ ಕೈ ಜೋಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರಾದ ಕುಮಾರಿ ವಿಜೇತಾ ಕೆ., ಶ್ರೀಮತಿ ಸಾವಿತ್ರಿ, ಶ್ರೀಮತಿ ಸವಿತಾ, ಶ್ರೀಮತಿ ಅರುಣಾ ಕುಮಾರಿ ಇವರು ಸಹರಿಸಿದರು. ಶಾಲೆಯ ಮುಖ್ಯ ಗುರುಗಳಾದ ಶ್ರೀ ರಮೇಶ್ ಶಿರ್ಲಾಲ್ ಇವರು ಉಪಸ್ಥಿತರಿದ್ದವರನ್ನು ಸ್ವಾಗತಿಸಿ, ಶ್ರೀಮತಿ ಆಶಾಲತಾ ಇವರು ಧನ್ಯವಾದಗೈದರು. ಶ್ರೀಮತಿ ಲತಾ ರಮೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.