ಕುಂದಾಪುರ : ಕುಂದಾಪುರ ರಂಗನಹಿತ್ಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಯಾನದ 9ನೇ ಕಾರ್ಯಕ್ರಮ ಶ್ವೇತ ಸಂಜೆಯಲ್ಲಿ ‘ಯಕ್ಷಗಾನ ವೈಭವ’ ಕಾರ್ಯಕ್ರಮವು ದಿನಾಂಕ 17-03-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜೇಶ್ ಕಾವೇರಿ ಕುಂದಾಪುರ ಇವರು ಪ್ರಾಯೋಜಕರಾದ ಗೋಪಾಲ ಪೂಜಾರಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಸಂಸ್ಥೆಯ ಕಲಾ ಚಟುವಟಿಕೆಯು ನಿರಂತರವಾದಾಗ ಪ್ರೋತ್ಸಾಹಿಸಿ ಸಂಭ್ರಮಿಸಬೇಕಾದದ್ದು ಕಲಾಭಿಮಾನಿಗಳು. ಯಶಸ್ವಿ ಕಲಾವೃಂದದ ಪ್ರದರ್ಶನಗಳು ಕೇವಲ ಸ್ಥಳೀಯವಾಗಿರದೇ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಪ್ರದರ್ಶನಕ್ಕೆ ಅವಕಾಶ ದೊರೆತಾಗ ಕಲಿತ ಚಿಣ್ಣರ ಕಲಾ ಪ್ರತಿಭೆಗಳು ಇನ್ನಷ್ಟು ಬೆಳೆಯುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಕಲಾಭಿಮಾನಿಗಳ ಪ್ರೋತ್ಸಾಹ ಸಂಸ್ಥೆಯ ಶ್ವೇತಯಾನಕ್ಕೆ 108 ಕಾರ್ಯಕ್ರಮಗಳು ದೊರೆಯಬೇಕು” ಎಂದು ಹೇಳಿದರು.
“ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾದದ್ದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈವರೆಗೆ ಅದೆಷ್ಟೋ ಚಿಣ್ಣರ ಕಾರ್ಯಕ್ರಮಗಳು ರಾಜ್ಯದಾದ್ಯಂತ ಪ್ರದರ್ಶಿಸಲ್ಪಟ್ಟಿದ್ದವು. ಎಲ್ಲಾ ಕಾರ್ಯಕ್ರಮಗಳೂ ಪ್ರೇಕ್ಷಕರನ್ನು ಗೆದ್ದು ನಿಂತ ಕಾರ್ಯಕ್ರಮಗಳಾಗಿದ್ದವು. ಯಶಸ್ವಿ ಕಲಾವೃಂದದ ಚಿಣ್ಣರ ಕಾರ್ಯಕ್ರಮಗಳು ಯಶಸ್ಸಿನ ಕಾರ್ಯಕ್ರಮಗಳು” ಎಂದು ಅಭಿನಂದನೆ ಸ್ವೀಕರಿಸಿದ ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಸಂಘಟಕರಾದ ವಿಜಯ್ ಎಸ್. ಪೂಜಾರಿ, ಲಾಡು ಆನಂದ ಪೂಜಾರಿ, ಯಶಸ್ವೀ ಕಲಾವೃಂದದ ಶ್ವೇತಯಾನದ ಕಾರ್ಯದರ್ಶಿಗಳಾದ ಹೆರಿಯ ಮಾಸ್ಟರ್, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಶ್ರೀಧರ್ ಸುವರ್ಣ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ಯಶಸ್ವೀ ಕಲಾವೃಂದ ಮಕ್ಕಳ ಮೇಳದ ಕಲಾವಿದರಿಂದ ‘ಯಕ್ಷಗಾನ ವೈಭವ’ ರಂಗದಲ್ಲಿ ಪ್ರಸ್ತುತಿಗೊಂಡಿತು.