ಕಟೀಲು : ಯುಎಇ -ಮಧ್ಯಪ್ರಾಚ್ಯದ ಏಕೈಕ ಮತ್ತು ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ‘ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ’ ಇದರ ದಶಮಾನೋತ್ಸವ ಸಡಗರದ ಪ್ರಯುಕ್ತ ಕೇಂದ್ರದ ಕಲಿಕಾ ವಿದ್ಯಾರ್ಥಿಗಳಿಂದ ಶ್ರೀಕ್ಷೇತ್ರ ಕಟೀಲಿನ ರಥಬೀದಿಯ ಸರಸ್ವತಿ ಸದನದಲ್ಲಿ ದಿನಾಂಕ 10 ಆಗಸ್ಟ್ 2025ರಂದು ಹಮ್ಮಿಕೊಂಡ ‘ಯಕ್ಷಗಾನಾರ್ಚಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ “ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಯಕ್ಷಗಾನಕ್ಕೆ ಮಾನವ ಹೃದಯವಲ್ಲದೆ ದೇಶ-ದೇಶಗಳನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಸಂಸ್ಥೆ ಸಾಬೀತು ಪಡಿಸಿದೆ. ದುಬಾಯಿಯಲ್ಲಿ ಮಕ್ಕಳು, ಹಿರಿಯರು ಬೇಧಭಾವವಿಲ್ಲದೆ ಯಕ್ಷಗಾನವನ್ನು ಕಲಿತು ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇದೊಂದು ಸಾಂಸ್ಕೃತಿಕ ಬೆರಗು. ಮಕ್ಕಳು, ಮಹಿಳೆಯರು ಯಕ್ಷಗಾನ ಕಲಿತರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಅದರಲ್ಲೂ ಕಟೀಲು ತಾಯಿಯ ಸನ್ನಿಧಿಯಲ್ಲಿ ಅವರ ಸೇವೆ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿದೆ. ಮುಂದೆ ಈ ಸಂಸ್ಥೆ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವದೆತ್ತರಕ್ಕೆ ಬೆಳೆದು ಸಾಗರಾದಾಚೆ ಯಕ್ಷಗಾನದ ಕಂಪನ್ನು ಪಸರಿಸುವಂತಾಗಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಯಕ್ಷ ಶ್ರೀರಕ್ಷಾ ಗೌರವ ಪುರಸ್ಕಾರವನ್ನು ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಹಿಮ್ಮೇಳ ಗುರು ಮುರಳೀಧರ ಭಟ್ ಕಟೀಲು, ನಿವೃತ್ತ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ಹಾಗೂ ಇತ್ತೀಚಿಗೆ ಅಗಲಿದ ಯುವ ಸ್ತ್ರೀ ವೇಷಧಾರಿ ಆನಂದ ಕಟೀಲು ಇವರಿಗೆ ಮರಣೋತ್ತರವಾಗಿ ಗೌರವಾರ್ಪಣೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000/- ನಗದು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ನಡೆದು ಬಂದ ದಾರಿ ‘ಯಕ್ಷ ದರ್ಪಣ’ ಪುಸ್ತಕದ ಬಿಡುಗಡೆ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಹಾಗೂ ವೇದಮೂರ್ತಿ ಅನಂತಪದ್ಮನಾಭ ಅಸ್ರಣ್ಣ, ಉದ್ಯಮಿ ಶಶಿಧರ ಶೆಟ್ಟಿ, ಯುಗಪುರುಷದ ಸಂಪಾದಕ ಕೆ. ಭುವನಭಿರಾಮ ಉಡುಪ, ಉದ್ಯಮಿ ವಾಸುದೇವ ಭಟ್, ಸಂಗೀತ ವಿದ್ವಾನ್ ಲಕ್ಷ್ಮಿನಾರಾಯಣ ಉಪಾಧ್ಯಾಯ ಪಾಡಿಗಾರು ಉಡುಪಿ, ಕೇಂದ್ರದ ಸಂಚಾಲಕ ದಿನೇಶ್ ಟಿ. ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು. ಬೆಳಗ್ಗೆ ಕೇಂದ್ರದ ಬಾಲಕಲಾವಿದರಿಂದ ‘ಯಕ್ಷಗಾನ ಪೂರ್ವರಂಗ’ವನ್ನು ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮಿನಾರಾಯಣ ಅಸ್ರಣ್ಣ ಇವರು ಉದ್ಘಾಟಿಸಿದರು. ಕೇಂದ್ರದ ದಶಮಾನೋತ್ಸವದ ಸವಿನೆನಪಿನಲ್ಲಿ ಶ್ರೀದೇವಿ ಸನ್ನಿಧಿಯಲ್ಲಿ ಕೇಂದ್ರದ ಹಿರಿಯ ಹಾಗೂ ಕಿರಿಯ ಕಲಾವಿದರ ಕೂಡವಿಕೆಯಿಂದ ‘ಮಣಿಕಂಠ ಮಹಿಮೆ’ ಯಕ್ಷಗಾನ ಪ್ರಸ್ತುತಿಗೊಂಡಿತು.