ಕಾರ್ಕಳ : ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಆಯೋಜಿಸಿದ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ದಿನಾಂಕ 12 ಏಪ್ರಿಲ್ 2025 ರಂದು ನಿಟ್ಟೆಯಲ್ಲಿ ನಡೆಯಿತು.
ನಿಟ್ಟೆಯ ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ವಾಸುದೇವ ರಂಗ ಭಟ್ಟ ಮಾತನಾಡಿ “ಕೇವಲ ಕ್ಷೇತ್ರಗಳ ಆಶ್ರಯದಿಂದ ಹೊರಡುವ ಮೇಳಗಳಲ್ಲಿ ಒಮ್ಮೊಮ್ಮೆ ಕಲೆಯಿಂದ ಭಕ್ತಿ ಹೆಚ್ಚು ಮೇಲೈಸಿದರೂ, ಇಂಥ ಪ್ರಯತ್ನಗಳಿಂದ ಕಲೆಯ ಸತ್ವ ಉಳಿಸುವುದು ಸಾಧ್ಯ. ಕಲೆಯಲ್ಲಿ ಪ್ರತಿಷ್ಠಿತ ಸ್ಥಾನ ತಲುಪಿದ ಕಲಾವಿದನಿಗೆ ತನ್ನ ತಿರುಗಾಟದ ಮೇಳ ಅಥವಾ ಕ್ಷೇತ್ರದ ನಿರ್ದೇಶನವನ್ನು ಮೀರುವುದಕ್ಕೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಮೇಳದ ಯಾಜಮಾನ್ಯ ಹೊಂದಿದವರಿಗೆ ಕ್ಷೇತ್ರದ ಭಕ್ತರ ಭಾವನೆ ಗಮನದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ” ಎಂದರು.
ಯಕ್ಷಗಾನದ ಹಾಸ್ಯ ಲೋಕವನ್ನು ಶ್ರೀಮಂತಗೊಳಿಸಿದ ಬಂಟ್ವಾಳ ಜಯರಾಮ ಆಚಾರ್ಯರು ಕಲಾರಸಿಕರ ಹೃದಯದಲ್ಲಿ ಸದಾ ಬದುಕಿರುವ ಹೆಸರು. ವೈಶಿಷ್ಟಪೂರ್ಣ ಹಾಸ್ಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿ ನಗುವಿನ ಅಲೆಯನ್ನು ತೇಲಿಸಿದವರು ಇವರು ಹಿಮ್ಮೇಳ, ಮುಮ್ಮೇಳವೆರಡನ್ನೂ ಸಂಪೂರ್ಣ ಅಭ್ಯಾಸಿಸಿ ಓರ್ವ ಸವ್ಯಸಾಚಿ ಕಲಾವಿದನಾಗಿ ಗುರುತಿಸಿಕೊಂಡ ಸಾಧಕರಿವರು. ಕಲಾರಂಗದಲ್ಲಿ ಇವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ನಿಟ್ಟೆಯ ಎನ್. ಎಂ. ಎ. ಎಮ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ಯಕ್ಷಗವಿಷ್ಟಿ’ – ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ರಂಗಸ್ಥಳಕ್ಕೆ ‘ಕೀರ್ತಿಶೇಷ ಬಂಟ್ವಾಳ ಜಯರಾಮ ಆಚಾರ್ಯ ವೇದಿಕೆ’ ಎಂದು ಹೆಸರಿಸಿ ಗೌರವಿಸಲಾಯಿತು.
ಸಂಸ್ಥೆಯ ಪರಿಸರದ ಐದು ಕಾಲೇಜಿನ ಕಲಾವಿದರು ‘ರತ್ನಾವತಿ ಕಲ್ಯಾಣ’ ಪ್ರಸಂಗವನ್ನು ಸ್ಪರ್ಧೆಯ ಅಂಗವಾಗಿ ಆಡಿತೋರಿಸಿದರು.
ಭಾಗವಹಿಸಿದ ಕಾಲೇಜುಗಳು
ಗೋವಿಂದ ದಾಸ ಕಾಲೇಜು ಸುರತ್ಕಲ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರು, ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜೆಂಟ್ ಬಂಟಕಲ್ಲು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜು ಕಟೀಲು, ಸಂತ ಅಲೋಶಿಯಸ್ ವಿಶ್ವವಿದ್ಯಾಲಯ (ಪರಿಗಣಿತ) ಮಂಗಳೂರು. ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಮುರಳೀಧರ ಭಟ್, ಶೃತಕೀರ್ತಿರಾಜ ಎಸ್. ಹಾಗೂ ಚಂದ್ರಶೇಖರ ಭಟ್ ಕೆ. ಸಹಕರಿಸಿದರು.
ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರು ತೆಂಕು ಮತ್ತು ಬಡಗು ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಟ್ಟರು. ನಂತರ ಸಂಜೆ 7.30 ಕ್ಕೆ ಪ್ರಸಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು. ಸ್ಪರ್ಧೆಯ ವಿಜೇತರನ್ನು ಘೋಷಿಸಿ ಬಹುಮಾನಗಳನ್ನು ವಿತರಿಸಲಾಯಿತು. ಈ ವೇಳೆ ವೇದಿಕೆಯ ಮುಖ್ಯ ಅತಿಥಿಯಾಗಿ ನಿಟ್ಟೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜೀವನ್ ಕೆ. ಶೆಟ್ಟಿ ಮುಲ್ಕಿ ಉಪಸ್ಥಿತರಿದ್ದರು.
ಯಕ್ಷಗವಿಷ್ಟ ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಗಳ ವಿವರ
ಪ್ರಥಮ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು, ದ್ವಿತೀಯ – ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜೆಂಟ್, ಬಂಟಕಲ್ಲು, ತೃತೀಯ – ಸಂತ ಅಲೋಶಿಯಸ್ ವಿಶ್ವವಿದ್ಯಾಲಯ (ಪರಿಗಣಿತ) ಮಂಗಳೂರು. ಸ್ಪರ್ಧೆಯ 6 ಪಾತ್ರದ ಅತ್ಯುತ್ತಮ ಪಾತ್ರಧಾರಿಗಳಿಗೆ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.