16.04.1996ರಂದು ರಾಜಕುಮಾರ್ ಹಾಗೂ ಕಸ್ತೂರಿ ಇವರ ಮಗಳಾಗಿ ಛಾಯಾಲಕ್ಷ್ಮೀ ಆರ್.ಕೆ ಅವರ ಜನನ. Msc.(Chemistry), BEd ಇವರ ವಿದ್ಯಾಭ್ಯಾಸ. ತಂದೆಯೇ ಯಕ್ಷಗಾನದ ಮೊದಲ ಗುರು. ನಂತರದಲ್ಲಿ ಪೂರ್ಣಿಮಾ ಯತೀಶ್ ರೈ, ರಮೇಶ್ ಶೆಟ್ಟಿ ಬಾಯಾರು ಇವರ ಬಳಿ ಹೆಚ್ಚಿನ ನಾಟ್ಯವನ್ನು ಕಲಿತು ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ ಹಾಗೂ ಗಣೇಶಪುರ ಕೈಕಂಬದಲ್ಲಿ ಪ್ರತೀ ವರ್ಷ ನವರಾತ್ರಿಯ ಸಂದರ್ಭದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳು ಯಕ್ಷಗಾನಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಛಾಯಾಲಕ್ಷ್ಮೀ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪೂರ್ತಿ ಕಥೆಯನ್ನು ತಿಳಿದುಕೊಳ್ಳುತ್ತೇನೆ. ನಾವು ಬರೀ ನಮ್ಮ ವೇಷದ ಬಗ್ಗೆ ತಿಳಿದುಕೊಂಡರೆ ಸಾಕಾಗುವುದಿಲ್ಲ, ಅದರಿಂದ ಜ್ಞಾನವು ಬೆಳೆಯುವುದಿಲ್ಲ. ಮೊದಲೆಲ್ಲ ಪುಸ್ತಕಗಳನ್ನು ಓದಬೇಕಿತ್ತು, ಆದರೆ ಈಗ ಸುಲಭವಾಗಿ ಯೂಟ್ಯೂಬ್ ಅಲ್ಲಿ ಬೇರೆ ಬೇರೆ ಮೇಳಗಳು ಆಡಿದ ಇಡೀ ಪ್ರಸಂಗವೇ ಸಿಗುತ್ತದೆ, ಆದ್ದರಿಂದ ಇಡೀ ಪ್ರಸಂಗವನ್ನು ನೋಡಿಕೊಳ್ಳುತ್ತೇನೆ ಹಾಗೂ ಪ್ರತಿಯೊಂದು ವೇಷದ ನಡೆಯನ್ನು ನೋಡಿಕೊಳ್ಳುತ್ತೇನೆ. ನಾನು ಎಷ್ಟೊತ್ತಿಗೆ ರಂಗ ಪ್ರವೇಶ ಮಾಡಬೇಕು ಎನ್ನುವುದಕ್ಕಿಂತ ಬೇರೆ ವೇಷದವರು ಎಷ್ಟೊತ್ತಿಗೆ ಪ್ರವೇಶ ಮಾಡುತ್ತಾರೆ, ಯಾರ ವೇಷದ ನಂತರ ನನ್ನ ಪ್ರವೇಶ ಎಂದು ತಿಳಿದುಕೊಳ್ಳುತ್ತೇನೆ. ಯಾರಲ್ಲಿ ಎಷ್ಟು ಮಾತಾಡಬೇಕು ಎಂಬುದು ಅಗತ್ಯವಾಗಿರುತ್ತದೆ. ಬರೀ ನನ್ನ ಪಾತ್ರದ ಬಗ್ಗೆ ನಾನು ತಿಳಿದುಕೊಂಡು ಹೋದರೆ ಪ್ರಸಂಗ ಅಷ್ಟು ಚೆನ್ನಾಗಿ ಮೂಡಿಬರಲು ಸಾಧ್ಯವಿಲ್ಲ. ಮೊದಲಿಗೆ ತಾಳಮದ್ದಳೆ ಅರ್ಥವನ್ನು ಪೂರ್ತಿಯಾಗಿ ಕೇಳಿಕೊಂಡು 2-3 ಅರ್ಥಗಳನ್ನು ಸಂಗ್ರಹಿಸಿಕೊಂಡು ಬರೆದುಕೊಳ್ಳುತ್ತೇನೆ.
ಅದನ್ನೇ ಓದಿಕೊಂಡು ರಂಗ ಪ್ರವೇಶ ಮಾಡಿಕೊಳ್ಳುತ್ತೇನೆ. ಅದನ್ನು ನಂತರ ಭಾಗವತರಲ್ಲಿ, ಗುರುಗಳಲ್ಲಿ ಹಾಗೂ ಹಿಮ್ಮೇಳದವರಲ್ಲಿ ಕೇಳಿ ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಛಾಯಾಲಕ್ಷ್ಮೀ.
ದೇವಿ ಮಹಾತ್ಮೆ, ಸುದರ್ಶನ ವಿಜಯ, ಭಕ್ತ ಸುಧನ್ವ, ಕೃಷ್ಣಲೀಲೆ ಕಂಸ ವಧೆ, ದಕ್ಷಾಧ್ವರ, ನರಕಾಸುರ ಮೋಕ್ಷ, ಮುರಾಸುರ ವಧೆ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ರತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳು.
ದೇವಿ ಮಹಾತ್ಮೆಯಲ್ಲಿ:- ಬ್ರಹ್ಮ, ವಿಷ್ಣು, ಈಶ್ವರ, ಮಧು – ಕೈಟಭ, ಶುಂಭ – ನಿಶುಂಭ, ದೇವಿ, ಮಹಿಷ, ಚಂಡ – ಮುಂಡ, ವಿದ್ಯುನ್ಮಾಲಿ, ಯಕ್ಷ, ರಕ್ತಬೀಜ, ಪಾತ್ರಿ.
ಸುದರ್ಶನ ವಿಜಯ:- ಸುದರ್ಶನ, ದೇವೇಂದ್ರ, ವಿಷ್ಣು, ಶತ್ರುಪ್ರಸೂದನ.
ಕೃಷ್ಣ ಲೀಲೆ:- ಕೃಷ್ಣ, ಕಂಸ, ಬಲರಾಮ, ಶಕಟ.
ದಕ್ಷಾಧ್ವರ:- ದಕ್ಷ, ದಾಕ್ಷಾಯಿಣಿ, ದೇವೇಂದ್ರ, ಈಶ್ವರ, ಬ್ರಾಹ್ಮಣ, ವೀರಭಧ್ರ.
ನರಕಾಸುರ ಮೋಕ್ಷ:- ನರಕಾಸುರ, ದೇವೇಂದ್ರ, ವಿಷ್ಣು.
ಮುರಾಸುರ ವಧೆ:- ಮುರಾಸುರ, ವಿಷ್ಣು, ದೇವೇಂದ್ರ, ರಕ್ಕಸ ದೂತ.
ರತಿ ಕಲ್ಯಾಣ:- ದ್ರೌಪದಿ, ಕೌಂಡ್ಲಿಕ, ಕಮಲಭೂಪ ಇತ್ಯಾದಿ ಹಾಗೂ ಇಲ್ಲಿಯವರೆಗೆ ಮಾಡಿದ ಎಲ್ಲಾ ವೇಷಗಳೂ ನೆಚ್ಚಿನ ವೇಷಗಳು ಎಂದು ಹೇಳುತ್ತಾರೆ ಛಾಯಾಲಕ್ಷ್ಮೀ.
ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಇಂದು ತುಂಬಾ ಉಚ್ಚಾಯಮಾನ ಸ್ಥಿತಿಯಲ್ಲಿದೆ. ಯಕ್ಷಗಾನ ಕಲಾವಿದರಿಗೆ ತುಂಬಾ ಗೌರವ ಸಿಗುತ್ತಿದೆ. ಈಗಿನ ಯುವ ಪೀಳಿಗೆ ಯಕ್ಷಗಾನದಲ್ಲಿ ತುಂಬಾ ತೊಡಗಿಸಿಕೊಳ್ಳುತ್ತಿದೆ.
ಸಾಮಾಜಿಕ ಜಾಲತಾಣಗಳಿಂದ ಯಕ್ಷಗಾನಕ್ಕೆ ತುಂಬಾ ಪ್ರೋತ್ಸಾಹ ಸಿಗುತ್ತಿದೆ.
ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.
ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನಾನು ಕಲಿತ ವಿದ್ಯೆಯನ್ನು ಬೇರೆಯವರಿಗೆ ಕಲಿಸಬೇಕು ಹಾಗೂ ನಾನು ಹೋಗುವ ಶಾಲೆ/ಕಾಲೇಜ್ ನಲ್ಲಿ ಒಂದು ಸ್ವಂತ ಯಕ್ಷಗಾನ ತಂಡವನ್ನು ಕಟ್ಟಿ ಯಕ್ಷಗಾನ ಕಲಿಸಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಛಾಯಾಲಕ್ಷ್ಮೀ.
ಕನ್ನಡ, ತುಳು, ಇಂಗ್ಲಿಷ್, ಹಿಂದಿ ಹೀಗೆ ನಾಲ್ಕು ಭಾಷೆಗಳಲ್ಲಿ ಯಕ್ಷಗಾನ ವೇಷ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ, ದೆಹಲಿ ಮುಂತಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ.
ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಬಾಳ, ಯಕ್ಷಾರಾಧನ ಕಲಾ ಕೇಂದ್ರ, ಕದಳಿ ಕಲಾ ಕೇಂದ್ರ, ಸರಯೂ ಯಕ್ಷ ವೃಂದ ಮೇಳದಲ್ಲಿ ತಿರುಗಾಟ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ ಛಾಯಾಲಕ್ಷ್ಮೀ.
ಮುಂಬೈ ಅಜೆಕಾರು ಬಳಗದಿಂದ ಸನ್ಮಾನ, ಗಣೇಶೋತ್ಸವ ಸಮಿತಿ ಸುರತ್ಕಲ್, ಲಯನ್ಸ್ ಕ್ಲಬ್ ಕಾಟಿಪಳ್ಳ, SDMನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ವೈಯಕ್ತಿಕ ವೇಷಕ್ಕೆ ತೃತೀಯ ಬಹುಮಾನ, ಯಕ್ಷಾರಾಧನ ಕಲಾ ಕೇಂದ್ರದಿಂದ ಸನ್ಮಾನ ಛಾಯಾಲಕ್ಷ್ಮೀ ಅವರಿಗೆ ದೊರೆತಿದೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು