ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2024-25 ಸಾಲಿನ ‘ಯಕ್ಷ ಮಂಗಳ ಪ್ರಶಸ್ತಿ’ ಪ್ರದಾನ ಸಮಾರಂಭವು ಮಂಗಳೂರು ವಿ. ವಿ. ಯಲ್ಲಿನ ಡಾ. ಯು. ಆರ್. ರಾವ್ ಸಭಾಂಗಣದಲ್ಲಿ ದಿನಾಂಕ 27 ಜೂನ್ 2025ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಮಂಗಳೂರು ವಿ. ವಿ. ಇದರ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ಹಾಗೂ ವಿದ್ವಾಂಸರಾಗಿರುವ ಡಾ. ರಮಾನಂದ ಬನಾರಿ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ಪ್ರೊ. ಎಂ. ಎಲ್ ಸಾಮಗ, ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಇವರಿಗೆ ‘ಯಕ್ಷ ಮಂಗಳ ಪ್ರಶಸ್ತಿ’ ಹಾಗೂ ಲೇಖಕ, ಪತ್ರಕರ್ತ ಹಾಸ್ಯಗಾರರಾದ ಶಿರಸಿಯ ಅಶೋಕ ಇವರ ‘ದಶರೂಪಕಗಳ ದಶಾವತಾರ’ ಕೃತಿಗೆ ‘ಯಕ್ಷ ಮಂಗಳ ಕೃತಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕುಲಸಚಿವರಾದ ಕೆ. ರಾಜು ಮೊಗವೀರ ಉಪಸ್ಥಿತರಿರುವರು ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.