ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-07-2024ರಂದು ಮಧ್ಯಾಹ್ನ 2.30 ಗಂಟೆಗೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅವರು ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಮಂಗಳೂರು ವಿವಿ ಕುಲಸಚಿವರಾದ ಶ್ರೀ ಕೆ. ರಾಜು ಮೊಗವೀರ ಭಾಗವಹಿಸುವರು. ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅಭಿನಂದನಾ ಭಾಷಣ ಮಾಡುವರು.
ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ‘ಶ್ರೀರಾಮ ದರ್ಶನ’ ಯಕ್ಷಗಾನ ನೃತ್ಯರೂಪಕ ನಡೆಯಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಶ್ರೀ ಎಂ.ಕೆ. ರಮೇಶ ಆಚಾರ್ಯ ಅವರು ‘ಯಕ್ಷಮಂಗಳ ಪ್ರಶಸ್ತಿ’ ಸ್ವೀಕರಿಸಲಿದ್ದು, ‘ಪೀಠಿಕಾ ಪ್ರಕರಣ’ ಕೃತಿಯ ಲೇಖಕ ಶ್ರೀ ರಾಧಾಕೃಷ್ಣ ಕಲ್ಚಾರ್ ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಸ್ವೀಕರಿಸಲಿರುವರು.
‘ಯಕ್ಷಮಂಗಳ ಪ್ರಶಸ್ತಿ’ಯು ರೂ.25,000/- ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಯು ರೂ.10,000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ. ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ. ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕರ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಲಾಯಿತು.
ಶ್ರೀಧರ ಹಂದೆ : ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರಾಗಿ, ಯಕ್ಷಗಾನ ಸಂಘಟಕರಾಗಿ ಗುರುತಿಸಿರುವ ಶ್ರೀಧರ ಹಂದೆ ಇವರು ಮಕ್ಕಳ ಯಕ್ಷಗಾನ ಮೇಳವೆಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿ ಸಾಕಾರಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭಾರತ ಮಾತ್ರವಲ್ಲ, ಅಮೇರಿಕಾ, ಬೆಹರೈನ್, ಲಂಡನ್, ಮೆಂಚೆಸ್ಟರ್ ಮುಂತಾದೆಡೆ ಪ್ರದರ್ಶನ ನೀಡುವ ಮೂಲಕ ಯಕ್ಷಗಾನವನ್ನು ವಿಶ್ವ ವ್ಯಾಪಿಗೊಳಿಸಲು ಶ್ರಮಿಸಿದವರು. ಕಳೆದ 43 ವರ್ಷಗಳಲ್ಲಿ 2,000ಕ್ಕೂ ಮಿಕ್ಕಿ ಮಕ್ಕಳ ಯಕ್ಷ ಪ್ರದರ್ಶನ ನೀಡಿದ ಕೀರ್ತಿ ಇವರದ್ದು, ಯಕ್ಷಗಾನ ಭಾಗವತ, ಗಮಕಿ, ಕವಿ, ನಟ-ನಿರ್ದೇಶಕ, ನಾಟಕಕಾರ, ಸಂಘಟಕನಾಗಿಯೂ ಗುರುತಿಸಿಕೊಂಡಿರುವ ಇವರು ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
ಎಂ.ಕೆ. ರಮೇಶ್ ಆಚಾರ್ಯ : ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ರಂಗದ ಸರ್ವ ಸಮರ್ಥ ಸ್ತ್ರೀವೇಷ ಕಲಾವಿದರಾಗಿರುವ ಎಂ.ಕೆ. ರಮೇಶ್ ಆಚಾರ್ಯ ಇವರು ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಯಕ್ಷಗುರು, ಪ್ರಸಂಗಕರ್ತರಾಗಿಯೂ ಗುರುತಿಸಿದ್ದಾರೆ. ಸಾಂಪ್ರದಾಯಿಕ ನೆಲೆಯಲ್ಲಿಯೇ ಪೌರಾಣಿಕ ಪಾತ್ರಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಪ್ರದರ್ಶಿಸುವ ಎಂ.ಕೆ. ಆಚಾರ್ಯ ಅವರು ಸ್ತ್ರೀಪಾತ್ರಕೊಪ್ಪುವ ರೂಪ, ಮಧುರ ಕಂಠ, ಆಂಗಿಕ ಲಾಲಿತ್ಯ, ಪ್ರಗಲ್ಬ ಪಾಂಡಿತ್ಯ, ಸಶಕ್ತ ರಂಗನಡೆಯೊಂದಿಗೆ ಸ್ತ್ರೀಪಾತ್ರಧಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು. ಉತ್ತಮ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿ ಗುರುತಿಸಿಕೊಂಡಿರುವ ಇವರು ಅನೇಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನೂ ನೀಡಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರಾಗಿದ್ದಾರೆ.
‘ಪೀಠಿಕಾ ಪ್ರಕರಣ’ ಗ್ರಂಥ : ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ಪರಕಾಯ ಪ್ರವೇಶ, ಉಲಿಯ ಉಯ್ಯಾಲೆ, ಅರ್ಥಾಲೋಕ ಮೊದಲಾದ ಕೃತಿಗಳಿಂದ ಪ್ರಸಿದ್ಧರಾಗಿದ್ದಾರೆ ‘ಪೀಠಿಕಾ ಪ್ರಕರಣ’ ಇವರ ಇತ್ತೀಚೆಗಿನ ಒಂದು ಅಪೂರ್ವ ಕೃತಿಯಾಗಿದೆ. ಇದರಲ್ಲಿ 38 ಪ್ರಸಂಗಗಲ್ಲಿ ಬರುವ ಆಯ್ದ 140 ಪಾತ್ರಗಳ ಈ ಪೀಠಿಕೆ ಯಕ್ಷಗಾನ ಅರ್ಥಧಾರಿಗಳಿಗೆ ಮತ್ತು ವೇಷಧಾರಿಗಳಿಗೆ ಕೈ ದೀವಿಗೆಯಾಗಿದೆ. ಯಕ್ಷಗಾನ ಅರ್ಥಗಾರಿಕೆಯ ಮೌಲಿಕ ಸಂಗತಿ, ವಿಶಿಷ್ಟ ಶಕ್ತಿ ಸಾಮರ್ಥ್ಯವನ್ನು ಕಲ್ಚಾರ್ ಅವರು ಈ ಪೀಠಿಕೆಗಳಲ್ಲಿ ನಿರೂಪಿಸಿದ್ದಾರೆ.