ಉಡುಪಿ : ಯಕ್ಷಗಾನ ಕಲಾರಂಗವು ಪ್ರತೀವರ್ಷ ವೃತ್ತಿ ಕಲಾವಿದರಾದ 1300 ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ ಡೈರಿಯನ್ನು ಪ್ರಕಟಿಸುತ್ತಿದ್ದು, 2026ರ ಯಕ್ಷನಿಧಿ ಡೈರಿಯನ್ನು ದಿನಾಂಕ 17 ಡಿಸೆಂಬರ್ 2025ರಂದು ಬಾರ್ಕೂರು ಬಳಿಯ ಬೆಣ್ಣೆಕುದುರು ಕುಲಮಹಾ ಸ್ತ್ರೀ ದೇವಳದಲ್ಲಿ ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಇವರು ಬಿಡುಗಡೆಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯ ಚಟುವಟಿಕೆಗಳು ಬೆರಗುಂಟುಮಾಡುವಂತದ್ದು, ಕಲಾರಂಗಕ್ಕೆ ಶ್ರೇಯಸ್ಸಾಗಲೆಂದು ಶುಭ ಹಾರೈಸಿದರು.

ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ 50% ರಿಯಾಯತಿಯ ಬಸ್ ಪಾಸನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್ ಇವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. 10 ತಿಂಗಳ ಅವಧಿಯ ಬಸ್ ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂಬುದಾಗಿ ಈ ಸಂದರ್ಭದಲ್ಲಿ ಸುರೇಶ್ ನಾಯಕರು ನುಡಿದರು. ವಿವಿಧ ಮೇಳಗಳ 500ಕ್ಕೂ ಮಿಕ್ಕಿ ಕಲಾವಿದರು ಪ್ರತಿ ವರ್ಷ ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂಬುದಾಗಿ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಕೆ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ, ಭುವನ ಪ್ರಸಾದ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಮೇಳಗಳ ಪ್ರತಿನಿಧಿಗಳಾದ ಹರಿಶ್ಚಂದ್ರ ಆಚಾರ್ಯ, ಕೃಷ್ಣ ಪಿ., ಜ್ಞಾನೇಂದ್ರ ತೀರ್ಥಹಳ್ಳಿ, ಆನಂದ ದೇವಾಡಿಗ, ರವಿ ನಾಯಕ, ಶ್ರೇಯಸ್, ಸುದೇಶ್, ರಾಜೇಶ್ ಬೈಕಾಡಿ, ಶ್ರೀನಿವಾಸ ಅಡಿಗ, ರವಿ ನಾಯ್ಕ್, ಬಾಡ, ಸುಕೇಶ್, ಸುರೇಶ್ ಆಚಾರ್ಯ, ವಂಡಾರು ರಮೇಶ್ ಮಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
