ಮೂಡುಬಿದಿರೆ : ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ ವತಿಯಿಂದ 26ನೇ ವರ್ಷದ ಬಹುಆಯಾಮಗಳ ಯಕ್ಷಗಾನ ಪ್ರಸ್ತುತಿ ‘ಯಕ್ಷ ಸಂಭ್ರಮ -2023’ ಮೂಡುಬಿದಿರೆಯ ಕನ್ನಡ ಭವನದಲ್ಲಿ ದಿನಾಂಕ 30-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ, ವಹಿಸಿದ್ದು, ಮೂಡುಬಿದಿರೆಯ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಉದ್ಘಾಟಿಸಿ, ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ತಂತ್ರಿ ಆಶೀರ್ವಚನ ನೀಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ರಾಮಕೃಷ್ಣ ರಾವ್ ರೆಂಜಾಳ ಮತ್ತು ಶ್ರೀ ನಾರಾಯಣ ಶೆಟ್ಟಿ ಪೆರುವಾಯಿಯವರಿಗೆ ‘ಯಕ್ಷದೇವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಯಕ್ಷಗಾನ ಕರಾವಳಿಯ ಗಂಡು ಕಲೆ ಎನ್ನುವುದಕ್ಕಿಂತ ಅದು ಕರ್ನಾಟಕದ ಗಂಡು ಕಲೆ ಎನ್ನುವುದೇ ಅರ್ಥಪೂರ್ಣವಾಗಿದೆ. ರಾಜ್ಯದಲ್ಲಿ 84ರಷ್ಟು ಕಲಾ ಪ್ರಕಾರಗಳಲ್ಲಿ ಯಕ್ಷಗಾನವನ್ನು ಮೀರಿದ ಪ್ರಕಾರವಿಲ್ಲ. ಒಂದು ಕಾಲಕ್ಕೆ ಪೌರಾಣಿಕ ಪ್ರಸಂಗಗಳಿಗೆ ಬೇಡಿಕೆಯಿಲ್ಲ ಎನ್ನುವ ವಾತಾವರಣ ಸೃಷ್ಟಿಯಾದರೂ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಚೇತರಿಸಿಕೊಂಡ ಈ ಯಕ್ಷಗಾನ ಕಲೆಯಲ್ಲಿ ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ” ಎಂದರು.
ಕುಕ್ಕುಂದೂರಿನ ವೇದ ಮೂರ್ತಿ ಗೋವಿಂದ ಭಟ್ ಮಾತನಾಡುತ್ತಾ “ಯಕ್ಷಗಾನವು ಸರ್ವ ಜನರಿಗೂ ಮನಸ್ಸಿಗೆ ಸಂತೋಷ ನೀಡುವ, ಹಿತ ಬಯಸುವ ಕಲೆಯಾಗಿದೆ” ಎಂದರು. ಇದೇ ವೇಳೆ ಮಂಗಳೂರು ಕೂಡುಮಲ್ಲಿಗೆ ಕೆ.ಕೃಷ್ಣ ಶೆಟ್ಟಿ ಅವರ ‘ಯಕ್ಷಗಾನ ಪುರಾಣ ಜ್ಞಾನಪ್ರದೀಪಿಕಾ’ ಕೃತಿಯನ್ನು ಅವರು ಲೋಕಾರ್ಪಣೆಗೊಳಿಸಿದರು. ಯುವ ಯಕ್ಷಗಾನ ಕಲಾವಿದೆ ಕುಮಾರಿ ರಂಜಿತಾ ಎಲ್ಲೂರು ಅವರನ್ನು ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಎಂ.ಆರ್.ಪಿ.ಎಲ್.ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಬಿ.ಎಚ್.ವಿ. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಉಡುಪಿಯ ಇಂಚರ ಸರ್ಜಿಕಲ್ ಕ್ಲಿನಿಕ್‌ನ ಡಾ. ವೈ ಸುದರ್ಶನ್ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಹನುಮಗಿರಿ ಮೇಳದ ವ್ಯವಸ್ಥಾಪಕ ಶ್ರೀ ದಿವಾಕರ ಕಾರಂತ್, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್ ಉಪಸ್ಥಿತರಿದ್ದರು. ಯಕ್ಷಸಂಗಮದ ಸಂಚಾಲಕ ಶಾಂತಾರಾಮ್ ಕುಡ್ವ ಪ್ರಶಸ್ತಿ ಪುರಸ್ಕ್ರತರ ಅಭಿನಂದನೆ, ವನಜಾಕ್ಷಿ ಅಮ್ಮನವರ ಸಂಸ್ಮರಣೆ ನಡೆಸಿಕೊಟ್ಟರು. ಅಭಿನಂದನಾ ಮಾತುಗಳನ್ನು ಆಡಿದರು. ಯಕ್ಷದೇವ ಮಿತ್ರ ಕಲಾ ಮಂಡಳಿಯ ಅಧ್ಯಕ್ಷರಾದ ಶ್ರೀ ದೇವಾನಂದ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಲಾವಿದ ಸುಬ್ರಹ್ಮಣ್ಯ ಬೈಪಡಿತ್ತಾಯ ಸನ್ಮಾನ ಪತ್ರ ವಾಚಿಸಿ, ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿ, ಯಕ್ಷಗುರು ಮಹಾವೀರ ಪಾಂಡಿ ವಂದಿಸಿದರು.
ಇದೇ ದಿನ ಶ್ರೀ ಯಕ್ಷದೇವ ಸಾಧನಾ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಕೃಷ್ಣಲೀಲೆ ಕಂಸವಧೆ’, ಎನ್.ಎಂ.ಎ.ಎಮ್. ಐಟಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ‘ಶರಣಸೇವಾ ರತ್ನ’, ಹಿರಿಯ ಹಾಗೂ ಕಿರಿಯ ಭಾಗವತರಿಂದ ‘ಗಾನವೈಭವ’, ಹೆಸರಾಂತ ಕಲಾವಿದರಿಂದ ‘ನಚಿಕೇತೋಪಾಖ್ಯಾನ’ ತಾಳಮದ್ದಳೆ, ‘ನಾಟ್ಯವೈಭವ’, ‘ಹಾಸ್ಯವೈಭವ’, ತೆಂಕು ಬಡಗು ಕೂಡಾಟ ಯಕ್ಷಗಾನ ಬಯಲಾಟ ‘ಶ್ಯಮಂತಕ ರತ್ನ’ ಹಾಗೂ ರಾತ್ರಿ ದೊಂದಿ ಬೆಳಕಿನಾಟದಲ್ಲಿ ಯಕ್ಷಗಾನ ‘ಪಂಚವಟಿ’ ಪ್ರದರ್ಶಿಸಲ್ಪಟ್ಟವು.