ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ-ಯಕ್ಷಶಿಕ್ಷಣ ನಾಟ್ಯ ಅಭ್ಯಾಸವು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕದ ನೇತೃತ್ವದಲ್ಲಿ ದಿನಾಂಕ 04 ಜುಲೈ 2025ರಂದು ಬಡಗ ಎಕ್ಕಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಈ ಯಕ್ಷಶಿಕ್ಷಣ ತರಗತಿಯನ್ನು ಉದ್ಘಾಟನೆಗೈದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಕಟೀಲು ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ “ಯಕ್ಷ ಶಿಕ್ಷಣವು ವಿದ್ಯಾರ್ಥಿಗಳಿಗೆ ಮೊಳಕೆಯಿಂದಲೇ ಲಭ್ಯವಾದರೆ ಅದು ಹೆಮ್ಮರವಾಗಿ ಬಹುಕಾಲ ಉಳಿಯುತ್ತದೆ. ಲಕ್ಷಾಂತರ ಜನರು ಯಕ್ಷಗಾನ ಕಲೆಯ ಅಭಿಮಾನಿಗಳು, ಅದರ ಸೇವೆಯ ಆರಾಧಕರು, ಯಕ್ಷಗಾನದಲ್ಲಿ ಅರ್ಥಗಾರಿಕೆ ಮಾತುಗಾರಿಕೆ ಮೊದಲಾದ ನೀತಿ ನಿಯಮಗಳಿವೆ. ಶಿಕ್ಷಣ ರಂಗದಲ್ಲಿ ನೀಡುವ ಶಿಸ್ತಿನ ಜೊತೆಗೆ ಯಕ್ಷಗಾನವು ದೈಹಿಕ ವ್ಯಾಯಾಮವನ್ನು ಹೆಚ್ಚಿಸುತ್ತದೆ. ಇದರಿಂದ ಕಲಿಕೆಯಲ್ಲಿ ಏಕಾಗ್ರತೆ ಶಿಸ್ತು ಸ್ಮರಣೆ ಹೆಚ್ಚಾಗುತ್ತದೆ. ಅನೇಕ ಕಲಾವಿದರು ಶಿಕ್ಷಣ ಸಂಸ್ಥೆಗಳು ಇದರಿಂದ ಸಹಾಯವನ್ನು ಪಡೆದುಕೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದ್ದರಿಂದ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಗೆ ಬಹು ಅಗತ್ಯ” ಎಂದು ಹೇಳಿದರು.
“ಯಕ್ಷಗಾನ ಜ್ಞಾನ ವೃದ್ಧಿಸುವ ಕಲೆಯಾಗಿ, ಸಾಂಸ್ಕೃತಿಕ ಸಾಂಪ್ರದಾಯಿಕ ಪರಂಪರೆಯಾಗಿ, ಬದುಕಿಗೆ ವೃತ್ತಿ ಮತ್ತು ಪ್ರವೃತ್ತಿಯ ಶಕ್ತಿಯಾಗಿ, ನಮ್ಮ ಇರುವಿಕೆಯ ಬದುಕಿನ ತೇಜಸ್ಸನ್ನು ಹೆಚ್ಚಿಸಲು ಸಹಕಾರಿ. ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಬೆಳೆಸುವ ಕಲೆಯಾಗಿ ಸಾಂಸ್ಕೃತಿಕ ಮೌಲ್ಯ ವರ್ಧಿಸುವ ಮುಂದುವರಿಕೆಯಾಗಿ ಬೆಳೆದು ಬಂದಿರುವ ಯಕ್ಷಗಾನ ಕಲಿಕೆಯು ವಿದ್ಯಾರ್ಥಿ ಜೀವನದಲ್ಲಿ ಬಹು ಅಗತ್ಯ. ಪ್ರಸ್ತುತ ಸುಮಾರು 85ಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ 9,000 ವಿದ್ಯಾರ್ಥಿಗಳು ಯಕ್ಷ ಶಿಕ್ಷಣದ ಪ್ರಯೋಜನವನ್ನು ಪಡೆದು ಸಾಂಸ್ಕೃತಿಕ ರಂಗದ ರೂವಾರಿಗಳಾಗಿ ಮುಂದುವರೆಯುತ್ತಿರುವುದು ಇದರ ಯಶಸ್ಸಾಗಿದೆ” ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಕಟೀಲು ಎಕ್ಕಾರು ಘಟಕದ ಪ್ರಧಾನ ಸಂಚಾಲಕರಾದ ಶ್ರೀ ನಿತೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಶ್ರೀ ರತ್ನಾಕರ ಶೆಟ್ಟಿ ಇವರು “ಯಕ್ಷಗಾನವನ್ನು ಜೀವನದ ಪ್ರೀತಿಯ ಕಲೆಯಾಗಿ ಆರಾಧಿಸುತ್ತಾ ಅದರಲ್ಲೇ ಸಾಧನೆಗೈಯುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಪಟ್ಲರವರ ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಶಾಲಾ ಶಿಕ್ಷಣದಲ್ಲಿ ಯಕ್ಷ ಶಿಕ್ಷಣವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಸಮರ್ಥ ಗುರುಗಳ ಮಾರ್ಗದರ್ಶನದಲ್ಲಿ ನೀಡುತ್ತಾ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಾಂಸ್ಕೃತಿಕ ಮೌಲ್ಯ ವರ್ಧನೆಯಾಗುವಲ್ಲಿ ನಮ್ಮ ಪರಂಪರೆ ಉಳಿಸಿ ಬೆಳೆಸುವಲ್ಲಿ ನಡೆಸುವ ಕಾರ್ಯ ಬಹಳ ಅಭಿನಂದನಾರ್ಹ ಮತ್ತು ಶಾಲೆಯು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯುತ್ತಿರುವುದು ಶ್ಲಾಘನೀಯ” ಎಂದು ಪ್ರಶಂಶಿಸಿದರು.
ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ, ಪ್ರಧಾನ ಸಂಚಾಲಕರಾದ ಶ್ರೀ ನಿತೇಶ್ ಶೆಟ್ಟಿ, ಸಂಚಾಲಕರಾದ ಶ್ರೀ ಸತೀಶ್ ಶೆಟ್ಟಿ, ಯಕ್ಷ ಶಿಕ್ಷಣದ ಗುರುಗಳಾದ ಶ್ರೀ ರಾಮಪ್ರಕಾಶ್ ಕಲ್ಲೂರಾಯ, ಶ್ರೀ ಸುರೇಶ್ ಶೆಟ್ಟಿ, ಶ್ರೀಮತಿ ಇಂದಿರ ಎನ್. ರಾವ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಮತಿ ಚಿತ್ರಶ್ರೀ ಕೆ. ಕಾರ್ಯಕ್ರಮ ನಿರೂಪಿಸಿ, ಯಕ್ಷ ಶಿಕ್ಷಣದ ನೋಡಲ್ ಶಿಕ್ಷಕರಾದ ಡಾ. ಅನಿತ್ ಕುಮಾರ್ ಸ್ವಾಗತಿಸಿ, ಶ್ರೀಮತಿ ವಿದ್ಯಾ ಗೌರಿ ವಂದಿಸಿದರು.