ಮಲ್ಪೆ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ವತಿಯಿಂದ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗೆ ದಿನಾಂಕ 28 ಜುಲೈ 2025ರಂದು ಯಕ್ಷಶಿಕ್ಷಣ ತರಬೇತಿಯು ಉದ್ಘಾಟನೆಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಶಿಕ್ಷಕರಾದ ಶ್ರೀ ಸತೀಶ್ ಭಟ್ ಇವರು ವಹಿಸಿದ್ದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಮಾರ್ಚ್ ತಿಂಗಳಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಒಂದು ವಾರ ನಡೆದ ಸನಿವಾಸ ಶಿಬಿರದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು ಸ್ವತಃ ಮುಖವರ್ಣಿಕೆಯನ್ನು ಮಾಡಿಕೊಂಡು ಕುಣಿದು ಬಾಲಗೋಪಾಲ ಪ್ರದರ್ಶನಗೈದರು. ಕಾರ್ಯಕ್ರಮದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀಧರ್ ಕೋಟ್ಯಾನ್, ಯಕ್ಷಗಾನ ಗುರುಗಳಾದ ಶ್ರೀ ಕೇಶವ ರಾವ್ ಬಡನಿಡಿಯೂರು ಹಾಗೂ ಯಕ್ಷಗಾನದ ಮಾರ್ಗದರ್ಶಕ ಶಿಕ್ಷಕಿಯಾದ ಶ್ರೀಮತಿ ವಾಣಿಶ್ರೀ ಉಪಸ್ಥಿತರಿದ್ದರು. ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯವಾದ ಕಾರ್ಯಕ್ರಮ ನೆರವೇರಿತು.