ತೆಕ್ಕಟ್ಟೆ: ಯಶಸ್ವೀ ಕಲಾವೃಂದ ರಿ. ಕೊಮೆ ತಕ್ಕಟ್ಟೆ ಆಶ್ರಯದಲ್ಲಿ ಯಕ್ಷದೇಗುಲ (ರಿ.) ಬೆಂಗಳೂರು ಹಾಗೂ ಸ್ಕ್ಯಾಚ್ ಸಂಸ್ಥೆಯ ಸಹಯೋಗದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಎನ್ನುವ ಕಾರ್ಯಕ್ರಮ ದಿನಾಂಕ 01 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಅಧುನಿಕ ತಂತ್ರಜ್ಞಾನ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಹಾಗೆಯೇ ಕಲೆಯಲ್ಲಿಯೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲಕ್ಕಿದೆ. ಬದಲಾಗುತ್ತಿರುವಂತಹ ಈ ಕಾಲಘಟ್ಟದಲ್ಲಿ ಅನೇಕ ತಂತ್ರಜ್ಞಾನಗಳ ಜೊತೆ ಕಲೆ ಬೆಳೆಯಬೇಕಾಗಿದೆ, ಉಳಿಯಬೇಕಾಗಿದೆ. ಬಯಲಿನಲ್ಲೇ ಯಕ್ಷಗಾನ ಕಲಿಯುವಂತಹ ಕಾಲಘಟ್ಟದಿಂದ ಗುರುಗಳ ಮುಖೇನ ಅಭ್ಯಾಸ ಮಾಡುವಂತಹ ಸ್ಥಿತಿಗೆ ಒಳಗಾದಂತಹ ಸಂದರ್ಭದಲ್ಲಿ ಇದೀಗ ಸ್ಕ್ಯಾಚ್ ಸಂಸ್ಥೆಗಳ ಮೂಲಕ ತಂತ್ರಜ್ಞಾನವನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಕ್ಷದೇಗುಲದಂತಹ ಪ್ರಸಿದ್ಧ ಸಂಸ್ಥೆಯು ಸ್ಕ್ಯಾಚ್ ಸಂಸ್ಥೆಯನ್ನು ಪರಿಚಯಿಸುತ್ತಾ ಯಶಸ್ವೀ ಕಲಾವೃಂದದ ಕಲಾವಿದರುಗಳಿಗೆ ಗುರುವಿಲ್ಲದೇ ಹೇಗೆ ಕಲಿಕೆ ಸಾಧ್ಯ ಎನ್ನುವುದನ್ನು ತೋರಿಸುವ ಪ್ರಿಯಾಂಕ ಕೆ. ಮೋಹನ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.” ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು, ಪ್ರಿಯಾಂಕ ಕೆ. ಮೋಹನ್, ಜ್ಯೋತಿ ಕೆದಲಾಯ, ಸುಜಾತ, ಪೂರ್ಣಿಮ, ವನಿತಾ ಉಪಾಧ್ಯ, ಶಾರದ ವಿ. ಹೊಳ್ಳ ಇನ್ನಿತರರು ಉಪಸ್ಥಿತರಿದ್ದರು.