ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕುರಿಯ ಮನೆಯಲ್ಲಿ ದಿನಾಂಕ 10-01-2024ರಂದು ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ-ದಾಖಲೀಕರಣ’ ಸರಣಿಯ ಎರಡನೇ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರು ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು. “ಹಲವು ದಶಕಗಳ ಹಿಂದೆಯೇ ಅಂದರೆ ಅಜ್ಜ, ತಂದೆ, ದೊಡ್ಡಪ್ಪರ ಕಾಲದಲ್ಲಿಯೇ ಕುರಿಯ ಮನೆ ಅನೇಕ ಯಕ್ಷಗಾನಾಸಕ್ತರಿಗೆ ಆಶ್ರಯ ನೀಡಿದ್ದರೊಂದಿಗೆ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ನಾಡಿಗೆ ನೀಡಿದೆ. ಕುರಿಯ ಮನೆಯಲ್ಲಿದ್ದ ಯಕ್ಷಗಾನದ ವಾತಾವರಣವೇ ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿ ಯಕ್ಷಗಾನದೆಡೆಗೆ ನನ್ನನ್ನು ಆಕರ್ಷಿಸುವಂತೆ ಮಾಡಿತ್ತು. ಯಕ್ಷಗಾನಕ್ಕೆ ಪಠ್ಯ ಇಲ್ಲದಿದ್ದರೂ ಹಿಂದಿನ ಕಾಲದಲ್ಲಿ ಯಕ್ಷಗಾನವನ್ನು ನೋಡಿ ಅನುಭವಿಸಿ ಕಲಿತು ಕಲಾವಿದರಾಗುತ್ತಿದ್ದರು. ಆದರೆ ಇತ್ತೀಚೆಗೆ ಕಲಾವಿದರೇ ಇಡೀ ಯಕ್ಷಗಾನ ನೋಡದೆ ತಮ್ಮ ಪಾತ್ರ ಮುಗಿಸಿ ಹೋಗುವವರೇ ಹೆಚ್ಚು. ಯಕ್ಷಗಾನ ಮತ್ತು ಅದರ ರಂಗ ನಡೆಗಳನ್ನು ಪರಿಪೂರ್ಣವಾಗಿ ಅರಿಯದೆ ಉತ್ತಮ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಯುವ ಕಲಾವಿದರು ಬದ್ಧತೆ, ಅಧ್ಯಯನಶೀಲ ಗುಣವನ್ನು ಬೆಳೆಸಿಕೊಂಡು ಯಕ್ಷಗಾನ ಶ್ರೀಮಂತಿಕೆಗೆ ಸಾಕ್ಷಿಯಾಗಬೇಕು” ಎಂದ ಅವರು ಹಲವು ದಶಕಗಳ ತಮ್ಮ ಯಕ್ಷಪಯಣದ ಅನುಭವವನ್ನು ಮೆಲುಕು ಹಾಕಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಹಿರಿಯ ಕಲಾವಿದರ ಯಕ್ಷಗಾನದ ಅನುಭವವನ್ನು ದಾಖಲೀಕರಣಗೊಳಿಸಿ ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಯಕ್ಷಾಯಣ-ದಾಖಲೀಕರಣ ಎಂಬ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದೆ. ಇದೀಗ ಸರಣಿಯ ಎರಡನೇ ಕಾರ್ಯಕ್ರಮವನ್ನು ಕುರಿಯ ನಿವಾಸದಲ್ಲಿ ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರ ಅನುಭವ ಕಥನವನ್ನು ದಾಖಲೀಕರಣಗೊಳಿಸುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಕುರಿಯ ಗಣಪತಿ ಶಾಸ್ತ್ರಿ ಅವರ ಸಹೋದರ ಕುರಿಯ ಗೋಪಾಲ ಶಾಸ್ತ್ರಿ, ಗಣಪತಿ ಶಾಸ್ತ್ರಿಯವರ ಪತ್ನಿ ಶ್ಯಾಮಲ, ಸಂಬಂಧಿಕರಾದ ಲಲಿತಾ, ಪಲ್ಲವಿ, ರಾಮಪ್ರಕಾಶ, ಶ್ರೀರಾಮ, ಗಂಗಾಲಕ್ಷ್ಮೀ, ನಾಟ್ಯ ಗುರುಗಳಾದ ದೀವಿತ್ ಕೋಟ್ಯಾನ್, ಯಕ್ಷಗಾನ ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್, ಸ್ವಾತಿ ರಾವ್, ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಪ್ರಸಾದ್, ಯಕ್ಷಮಂಗಳ ವಿದ್ಯಾರ್ಥಿ ಅಭಿರಾಮ್ ಮೊದಲಾದವರು ಉಪಸ್ಥಿತರಿದ್ದರು.