ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಐದನೇ ದಿನದ ಕಾರ್ಯಕ್ರಮ ದಿನಾಂಕ 11 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.
ತುಳು ಸಪ್ತಾಹದಲ್ಲಿ ಭಾಗವಹಿಸಿದ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ “ಸಮಾಜಕ್ಕೆ ಉತ್ತಮ ಸಂದೇಶವನ್ನು ಯಕ್ಷಗಾನ ಪೌರಾಣಿಕ ಪ್ರಸಂಗಗಳು ನೀಡುತ್ತವೆ. ಸಂಘಟನಾ ಬಲ ಸಮಾಜಕ್ಕೆ ಧೈರ್ಯ ತುಂಬುತ್ತದೆ. ಅದರ ಪ್ರಸಾರ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ಪಸರಿದೆ. ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ದಾಮೋದರ ನಿಸರ್ಗರು ಇಂತಹಾ ಅನೇಕ ಸಪ್ತಾಹಗಳನ್ನು ನಡೆಸಿದ್ದಾರೆ. ಇಂದು ಗರೋಡಿಯ ಬ್ರಹ್ಮ ಬೈದ್ಯರ್ಕಳ ಪುಣ್ಯಸ್ಥಳದಲ್ಲಿ ನಿಸರ್ಗರ ನೆನಪಿನ ಸಪ್ತಾಹ ನಡೆಸುತ್ತಿರುವುದರಿಂದ ಅದು ಆ ಚೇತನಕ್ಕೆ ತೃಪ್ತಿಯಾಗುವುದು. ಹಾಗಾಗಿ ತುಳು ಕೂಟದ ಸಂಘಟನಾ ಪರ್ವ ಕಾರ್ಯ ಮುಂದುವರಿಯಲಿ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಕ್ಷ ಕಲಾವಿದ ಜಬ್ಬಾರ್ ಸಮೋರನ್ನು ತುಳು ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗರು ಗೌರವಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ನಾಗೇಶ ದೇವಾಡಿಗ, ವರ್ಕಾಡಿ ರವಿ ಅಲೆವೂರಾಯ, ಮಾಧುಸೂದನ ಅಲೆವೂರಾಯ, ಶಶಿಧರ ಪೊಯ್ಯುತ್ತಬೈಲ್, ನ್ಯಾಯವಾದಿ ಗೋಪಾಲಕೃಷ್ಣ ಭಟ್ ಗುತ್ತಿಗಾರ್ ಉಪಸ್ಥಿತರಿದ್ದರು. ಬಳಿಕ ಸರಯೂ ಯಕ್ಷವೃಂದದಿಂದ ‘ಕಾನದ ಕೌಶಿಕೆ’ ತಾಳಮದ್ದಲೆ ಪ್ರಸ್ತುತಗೊಂಡಿತು.
