ಕಾಂತಾವರ : ಕಾಂತಾವರದ ಯಕ್ಷದೇಗುಲ ಸಂಸ್ಥೆಯ ಇಪ್ಪತ್ತೆರಡನೇ ವರ್ಷದ ‘ಯಕ್ಷೋಲ್ಲಾಸ 2024’ ಕಾರ್ಯಕ್ರಮವು 21 ಜುಲೈ2024ರ ಆದಿತ್ಯವಾರದಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಾಧವ ಎಂ. ಕೆ. ಮಾತನಾಡಿ “ಪ್ರಾಮಾಣಿಕ ಪ್ರಯತ್ನದಿಂದ ಸಂಘಟಿಸಿದ ಕಾರ್ಯಕ್ರಮಗಳ ಯಶಸ್ಸು ದೀರ್ಘಕಾಲ ನೆನಪಿಸುತ್ತದೆ. ಮಾಡುವ ಕಾಯಕದಲ್ಲಿ ಸಾಮಾಜಿಕ ಕಳಕಳಿ, ನಿಸ್ವಾರ್ಥ ಭಾವ ಹಾಗೂ ಕಲಾಪ್ರೇಮ, ಇದ್ದರೆ ಫಲ ಸಿದ್ಧಿಸುವುದು.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನರಂಗದಲ್ಲಿ ಕಲಾವಿದರಾಗಿ ದುಡಿದು ನಿವೃತ್ತಿ ಹೊಂದಿದ ಧರ್ಮಸ್ಥಳ ಮೇಳದ ನಿಡ್ಲೆ ಗೋವಿಂದ ಭಟ್ ಇವರಿಗೆ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಮತ್ತು ಸುರತ್ಕಲ್ ಮೇಳದ ಪುತ್ತಿಗೆ ಕುಮಾರ ಗೌಡರಿಗೆ ಬಾಯಾರು ದಿ. ಪ್ರಕಾಶ್ವಂದ್ರ ರಾವ್ ಸಂಸ್ಮರಣಾ ಪ್ರಶಸ್ತಿಯ ಜೊತೆಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉಜಿರೆ ಅಶೋಕ ಭಟ್ ಮತ್ತು ಮೂಡಬಿದ್ರೆ ಶಾಂತಾರಾಮ ಕುಡ್ವ ಇವರು ದಿವಂಗತರುಗಳ ಸಂಸ್ಮರಣೆ ಹಾಗೂ ಪ್ರಶಸ್ತಿ ಭಾಜನರ ಅಭಿನಂದನಾ ಭಾಷಣ ಮಾಡಿದರು.
ಬಾರಾಡಿಬೀಡು ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ‘ಯಕ್ಷೋಲ್ಲಾಸ’ ಕಲಾ ಸಂಭ್ರಮವನ್ನು ಉದ್ಘಾಟಿಸಿದರು. ಪ್ರಧಾನ ಅಭ್ಯಾಗತರಾಗಿ ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಸಾಹಿತಿ ಡಾ. ನಾ. ಮೊಗಸಾಲೆ, ಕರ್ಣಾಟಕ ಬ್ಯಾಂಕಿನ ನಿವೃತ್ತ ಜನರಲ್ ಮೇನೇಜರ್ ಬಿ. ಚಂದ್ರಶೇಖರ್ ರಾವ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಶುಭಾಶಂಸನೆಗೈದರು.
ಯಕ್ಷದೇಗುಲದ ಅಧ್ಯಕ್ಷರಾದ ಶ್ರೀಪತಿರಾವ್, ಕೋಶಾಧ್ಯಕ್ಷ ಧರ್ಮರಾಜ ಕಂಬಳಿ, ರಮೇಶ ಶೆಟ್ಟಿಗಾರ್, ಲಿಂಗಪ್ಪ ದೇವಾಡಿಗ, ರತನ್ ಬಾರಾಡಿ, ಸಂಜೀವ ಕೋಟ್ಯಾನ್ , ಸದಾನಂದ ಶೆಟ್ಟಿ, ಸಂದೇಶ್ ಮಾರ್ನಾಡ್, ಜಗದೀಶ್ ಜೈನ್ ಬಾಡಾರು, ವೆಂಕಟೇಶ್ ಕಾರ್ಕಳ, ಉದಯ್ ಪಾಟ್ಕರ್ ಹಾಗೂ ರಂಜಿತ್ ಹಾಜರಿದ್ದರು. ಕಾರ್ಯದರ್ಶಿ ಮಹಾವೀರ ಪಾಂಡಿ ಸ್ವಾಗತಿಸಿ, ಅಧ್ಯಾಪಕ ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿ, ಬೆಳುವಾಯಿ ದೇವಾನಂದ್ ಭಟ್ ವಂದಿಸಿದರು. ಸಭಾಕಾರ್ಯಕ್ರಮದ ನಂತರ ಖ್ಯಾತ ಕಲಾವಿದರಿಂದ ‘ವಿಶ್ವಾಮಿತ್ರ ಮೇನಕೆ’ ಯಕ್ಷಗಾನ ಬಯಲಾಟ, ‘ಕರ್ಣಾವಸಾನ’ ತಾಳಮದ್ದಳೆ, ಮತ್ತು ‘ವಿದ್ಯುನ್ಮತಿ ಕಲ್ಯಾಣ’ ಬಯಲಾಟ ಪ್ರಸ್ತುತಗೊಂಡಿತು.