ಭಾರತೀಯ ಕಲೆಗಳೆಲ್ಲಾ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಪ್ರಸಾರ ಮಾಡುತ್ತವೆ. ಶ್ರೇಷ್ಠ ಸಂದೇಶಗಳನ್ನೂ ನೀಡುತ್ತವೆ. ಧರ್ಮಪ್ರಸಾರವನ್ನು ಮಾಡುವುದಕ್ಕೆ ಮಾಧ್ಯಮವಾಗಿವೆ. ಆದುದರಿಂದಲೇ ಅವುಗಳೆಲ್ಲಾ ನಮ್ಮ ಹೆಮ್ಮೆಯ ಸಂಕೇತ ಎಂದು ಅಭಿಮಾನದಿಂದ ಹೇಳುತ್ತೇವೆ. ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ರಂಗವೇರಿ ಮಿಂಚುತ್ತಿದ್ದಾರೆ. ಇಂದು ಯುವ ಸಮೂಹ ಯಕ್ಷಗಾನ ಕಲಿತು ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿ ರಂಗವೇರುತ್ತಿದ್ದಾರೆ. ಇದು ಸಂತೋಷ ಪಡಬೇಕಾದ ವಿಚಾರ. ಹೀಗೆ ಇಂದು ಕಲಾಸೇವೆಯನ್ನು ಮಾಡುತ್ತಿರುವ ಅನೇಕ ಯುವ ಕಲಾವಿದರ ಸಾಲಿನಲ್ಲಿ ಕಲಾಸೇವೆಯನ್ನು ಮಾಡುತ್ತಿರುವ ಕಲಾವಿದರಲ್ಲಿ ಒಬ್ಬರು ಟಿ.ಎಸ್.ಶ್ರೀವತ್ಸ ಭಟ್.
13.05.2000ರಂದು ಟಿ.ಕೆ.ಶ್ರೀನಿವಾಸ್ ಹಾಗೂ ಟಿ.ಎಸ್ ಸರಳ ಇವರ ಮಗನಾಗಿ ಜನನ. ಬಿ.ಕಾಮ್ ಪದವಿಯನ್ನು ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಜೊತೆಗೆ MBA ವ್ಯಾಸಂಗ ಮಾಡುತ್ತಿದ್ದಾರೆ. ಊರಲ್ಲಿ ಆಗ್ತಾ ಇದ್ದಂತಹ ಯಕ್ಷಗಾನಗಳನ್ನು ನೋಡಿ ಹಾಗೂ ತಂದೆಯ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶ್ರೀವತ್ಸ.
ತೆಂಕುತಿಟ್ಟು ಯಕ್ಷಗಾನವನ್ನು ಟಿ.ಎನ್ ಜ್ಯೋತಿ ಹಾಗೂ ರಮೇಶ್ ಶೆಟ್ಟಿ ಬಾಯಾರು ಅವರ ಬಳಿ ಕಲಿತು ಬಡಗಿನ ನಾಟ್ಯವನ್ನು ಉಡುಪಿಯ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿ ಕಲಿಯುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಹಿರಿಯ ಕಲಾವಿದರಿಂದ ಆ ಪ್ರಸಂಗದ ಬಗ್ಗೆ ಹಾಗೂ ವೇಷದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಹೋಗಿ, ಭಾಗವತರಲ್ಲಿ ಪ್ರಸಂಗದ ನಡೆ ಹಾಗೂ ಯಾವ ಪದ್ಯಕ್ಕೆ ಯಾವ ನಾಟ್ಯವನ್ನು ಹೇಗೆ ಮಾಡಬೇಕು ಎನ್ನುವುದನ್ನ ಮಾತಾಡಿಕೊಂಡು ಹೋಗಿ ತಯಾರಿ ಮಾಡಿಕೊಳ್ಳುತ್ತೇನೆ.
ದಕ್ಷಯಜ್ಞ, ದೇವಿ ಮಹಾತ್ಮೆ, ಕಿರಾತಾರ್ಜುನ, ಜಾಂಬವತಿ ಕಲ್ಯಾಣ, ನರಕಾಸುರ, ಸುದರ್ಶನ ವಿಜಯ, ವೀರಮಣಿ ಕಾಳಗ, ಸುಧನ್ವಾರ್ಜುನ, ಕೃಷ್ಣಲೀಲೆ ಕಂಸ ವಧೆ, ಮಕರಾಕ್ಷ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ದಕ್ಷ, ಜಾಂಬವ, ವೀರಮಣಿ, ವಿದ್ಯುನ್ಮಾಲಿ, ಕೃಷ್ಣ, ಅರ್ಜುನ, ಮಕರಾಕ್ಷ, ನರಕಾಸುರ, ಶತ್ರುಪ್ರಸೂದನ, ವಿಷ್ಣು ಇತ್ಯಾದಿ ಹಾಗೂ ನಾನು ಮಾಡಿದ ಎಲ್ಲಾ ವೇಷವೂ ನೆಚ್ಚಿನ ವೇಷಗಳು ಎಂದು ಹೇಳುತ್ತಾರೆ ಶ್ರೀವತ್ಸ.
ಯಕ್ಷಗಾನ ರಂಗದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರಿಗೆ ಅನುಗುಣವಾಗಿ ನೂತನವಾದ ಪ್ರಯೋಗಗಳಿಂದ ಒಳಗೊಂಡಿದೆ. ಹಳೆಯ ಸೊಗಡು ಕಾಣದಿದ್ದರೂ ಇಂದಿನ ಕಾಲಘಟ್ಟಕ್ಕೆ ಸರಿಹೊಂದುವ ಹಾಗೆ ನಡೆಯುತ್ತಿದೆ.
ಪ್ರೇಕ್ಷಕರಿಂದಲೇ ಕಲೆಗೆ ಕಲಾವಿದರಿಗೆ ಒಂದು ಹೊಸ ಹುರುಪು. ಅವರು ಕೊಡುವ ಎಲ್ಲಾ ಪ್ರತಿಕ್ರಿಯೆಗಳು ಪರಿಗಣಿಸಬೇಕು ಎನ್ನುವುದಕ್ಕಿಂದ ನಮಗೆ ಯಾವುದನ್ನು ಸ್ವೀಕರಿಸಬಹುದು ಅದನ್ನು ತೆಗೆದುಕೊಂಡರೆ ಎಲ್ಲರಿಗೂ ಉತ್ತಮ. ಸರ್ವವನ್ನು ತಿಳಿಸುವ ಪ್ರೇಕ್ಷಕ ವರ್ಗ ಬರೇ ಯಕ್ಷಗಾನಕ್ಕೆ ಮಾತ್ರ ಅಲ್ಲ ಭಾರತೀಯ ಯಾವುದೇ ಸಾಂಸ್ಕೃತಿಕ ಕಲಾ ವಿಧಾನಗಳಲ್ಲಿ ಮಹತ್ವಪೂರ್ಣವಾದ ಸ್ಥಾನವನ್ನು ಪಡೆದಿದೆ ಅಂತ ಹೇಳಬಹುದು.
ಯಕ್ಷಗಾನ ರಂಗದ ಮುಂದಿನ ಯೋಜನೆ:-
ಯಕ್ಷಗಾನ ರಂಗಕ್ಕೆ ನನ್ನಿಂದ ಏನಾದರೂ ಆಗುವುದಿದ್ರೆ ಅದನ್ನು ಖಂಡಿತವಾಗಿಯೂ ಮಾಡುತ್ತೇನೆ. ಒಮ್ಮೆಯಾದರೂ ಯಾವುದಾದರೊಂದು ಮೇಳದಲ್ಲಿ ಕನಿಷ್ಟ ೧ ವರ್ಷ ತಿರುಗಾಟ ಮಾಡಬೇಕೆಂಬ ಹಂಬಲವಿದೆ. ನೋಡುವ ದೇವರು ಅನುಗ್ರಹಿಸಿದ ಹಾಗೆ ಆಗಲಿ.
ಪಾವಂಜೆ, ಕಮಲಶಿಲೆ, ನಡುಮನೆ ಇತ್ಯಾದಿ ಮೇಳದಲ್ಲಿ ಆಗೊಮ್ಮೆ ಈಗೊಮ್ಮೆ ವೇಷ ಮಾಡಿದ ಅನುಭವವಿದೆ. ಫೋಟೋಗ್ರಫಿ, ಕವನ ರಚನೆ, ಪುಸ್ತಕ ಓದುವುದು ಇವರ ಹವ್ಯಾಸಗಳು.
Photos By:- A.R Clicks, Navya Holla.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು