ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಮಹಿಳಾ ಸಮ್ಮಿಳನ’ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಸುಧಕ್ಷಣ ಆರ್. ಉಡುಪ ಇವರು ಉದ್ಘಾಟನೆಗೊಳಿಸಿ “ಇಪ್ಪತ್ತೈದರ ಏಳು ಬೀಳುಗಳೊಂದಿಗಿನ ಸಂಭ್ರಮವು ನಮಗೂ ಲಭಿಸಿದ್ದು ಭಾಗ್ಯ. ಕೃತಕತೆಯ ಯುಗದಲ್ಲಿ ನಮ್ಮನ್ನು ನಾವು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸ್ವಾಭಾವಿಕತೆಯ ಅರಿವು ಮೂಡುತ್ತದೆ. ಮಕ್ಕಳಲ್ಲಿಯೂ ಕಲೆಯ ಸಂಸ್ಕಾರವನ್ನು ಮೂಡಿಸಿದರೆ ಭವಿಷ್ಯದಲ್ಲಿ ಸ್ವಾಭಾವಿಕತೆಯನ್ನು ಕಂಡುಕೊಳ್ಳಬಹುದು. ಇಲ್ಲವಾದರೆ ಬದುಕು ಬಹಳ ಕಷ್ಟ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕಿ ಶಾಂತಾ ಗಣೇಶ್ ಕುಂಭಾಶಿ ಇವರನ್ನು ಅಭಿನಂದಿಸಲಾಯಿತು. “ಮಹಿಳಾ ಸಂಘಟನೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಕ್ತಿ ಉಳ್ಳದ್ದು. ಸಂಘಟನೆಯ ಮೌಲ್ಯವನ್ನು ಉಳಿಸಿಕೊಂಡು ಬೆಳೆಯುತ್ತಿರುವ ಹಲವು ಸಂಘಟನೆಗಳನ್ನು ನಾವು ಕಂಡಿದ್ದೇವೆ. ಆದರೆ ಇದು ಕಲೆಯನ್ನು ಮೈಗೂಡಿಸಿಕೊಂಡ ಯಶಸ್ವೀ ಕಲಾವೃಂದದ ಮಹಿಳಾ ಸಂಘಟನೆ. ಇದರಲ್ಲಿ ಮಧುರ ಮೈತ್ರಿ ಇವೆ” ಎಂದು ಅಭಿವಂದಿಸಿಕೊಂಡ ಶಾಂತಾ ಗಣೇಶ್ ಹೇಳಿದರು.
ವೇದಿಕೆಯಲ್ಲಿ ಭಾಗ್ಯಲಕ್ಷ್ಮೀ ವೈದ್ಯ, ಜ್ಯೋತಿ ಕೆದಲಾಯ, ಪೂರ್ಣಿಮ ಕೊಮೆ, ಸುಜಾತ ಕೊಮೆ, ಶಾರದಾ ಹೊಳ್ಳ ಇನ್ನಿತರರು ಉಪಸ್ಥಿತರಿದ್ದರು. ಪೂರ್ಣಿಮ ಕಾರ್ಯಕ್ರಮವನ್ನು ನಿರೂಪಿಸಿ, ಶಾರದಾ ಹೊಳ್ಳ, ಪೂಜಾ, ಪಂಚಮಿ ಪ್ರಾರ್ಥನೆಗೈದರು. ಬಳಿಕ ವಿವಿಧ ವಿನೋದಾವಳಿಗಳು ರಂಗ ಪ್ರಸ್ತುತಿಗೊಂಡವು.