ಬೆಂಗಳೂರು : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-108’ರ ಕಾರ್ಯಕ್ರಮ ದಿನಾಂಕ 08 ಫೆಬ್ರವರಿ 2025 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಿರೀಟಕ್ಕೆ ನವಿಲಗರಿಯನ್ನು ಇಡುವ ಮೂಲಕ ಉದ್ಘಾಟಿಸಿದ ರಂಗಭೂಮಿ, ಚನಚಿತ್ರ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆಯಾದ ಡಾ. ಉಮಾಶ್ರೀ ಮಾತನಾಡಿ “ಕರಾವಳಿಯ ಜೀವಂತ ಕಲೆಯಲ್ಲಿ ಜೀವಿಸುವ ಭಾಗ್ಯ ಸಿಕ್ಕಿದೆ. ಬಹುವಾಗಿ ಪಾಂಡಿತ್ಯ ಉಳ್ಳವರು ಶಾಸ್ತೀಯವಾಗಿ ಕಲಿತು, ಪರಿಪೂರ್ಣತೆಯನ್ನು ಸಾಧಿಸಿದ ಸಾವಿರ ಸಾವಿರ ಸಂಖ್ಯೆಗೂ ಮೀರಿದ ಕಲಾವಲಯವಾಳಿದ ಲೋಕಕ್ಕೆ ನಾನು ನನ್ನ ಸಂತೋಷಕ್ಕಾಗಿ ಬಂದಿದ್ದೇನೆ. ಯಶಸ್ವೀ ಕಲಾವೃಂದದ ಶ್ವೇತಯಾನದ ನೂರೆಂಟರಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ಶಾಸ್ತ್ರೀಯವಾಗಿ ಕಲಿತ ಪಂಡಿತರ ಟೀಕೆ ಟಿಪ್ಪಣಿಗಳಿಂದ ಹೊರತಾದವರು ನಾವು. ಯಾಕೆಂದರೆ ಯಕ್ಷ ಕಲೆಯೊಳಗೆ ಬೆರೆಯುವ ಅವಕಾಶಕ್ಕೆ ಖುಷಿ ಪಟ್ಟು ಬಂದವಳು ನಾನು. ಈ ಕಲೆಯನ್ನು ಗೌರವಿಸುತ್ತಾ ಒಪ್ಪಿದ್ದೇನೆ, ಅಪ್ಪಿದ್ದೇನೆ ಎಂದರು.
ಪ್ರೊ. ಪವನ್ ಕಿರಣ್‌ಕೆರೆ ಮಾತನಾಡಿ ಮಕ್ಕಳಿಗೆ ಕಲೆಯನ್ನು ಕಲಿಸುತ್ತಾ ಕಲೆಯನ್ನು ಕೈ ದಾಟಿಸುವ ಕೆಲಸವನ್ನು ಯಶಸ್ವಿ ಕಲಾವೃಂದ ಸಂಸ್ಥೆ ಮಾಡುತ್ತಿದೆ. ಕಲಾ ವಲಯದಲ್ಲಿ ಕಲಾವಿದ ವಿಜೃಂಭಿಸಬೇಕಾದರೆ ಸಂಘಟಕ ಮತ್ತು ಪ್ರೇಕ್ಷಕ ಇವೆರಡು ದೊಡ್ಡ ಆಸ್ತಿಯಾಗಿರುತ್ತದೆ. ಮೂರನೆಯ ದೊಡ್ಡ ಶಕ್ತಿಯಾಗಿ ಪೋಷಕ ನಿಂತರೆ ನಾಲ್ಕನೆಯವರಾಗಿ ಕಲಾವಿದರಾದ ನಾವು ಕಲೆಯನ್ನು ವಿಸ್ತರಿಸುತ್ತಾ, ಪೋಷಿಸುತ್ತಾ ಸಾಗುತ್ತೇವೆ. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸುತ್ತಾ ಯಕ್ಷಗಾನದ ಬಗೆಗೆ ಒಳ್ಳೆಯ ಪ್ರೇಕ್ಷಕ ವರ್ಗವನ್ನು ಮತ್ತು ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ನೀಡಲು ಯಶಸ್ವೀ ಕಲಾವೃಂದ ಮಾಡುತ್ತಿರುವ ಕೆಲಸವನ್ನು ನಾವು ಗಮನಿಸಲೇ ಬೇಕು. ಯಕ್ಷ ಕಲಾವಲಯದ ಆಚೆ ಇರುವವರು ಯಕ್ಷಗಾನಕ್ಕೆ ಬರುವಂತೆ ಆಗಬೇಕು. ಈ ಸಾಧನೆಯನ್ನು ನಟಿ ಉಮಾಶ್ರೀಯವರು ಆಗಮನದ ಮೂಲಕ ಸಾಧಿಸಿದ್ದಾರೆ. ಶ್ವೇತಯಾನ ನೂರೆಂಟಕ್ಕೆ ನಿಲ್ಲದೇ ಸಾವಿರದ ಕಾರ್ಯಕ್ರಮವಾಗಲಿ. ಅಕ್ಷರಾರ್ಥದಿಂದ ಸಾವೇ ಇರದ ಕಾರ್ಯಕ್ರಮ ಯಶಸ್ವೀ ಕಲಾವೃಂದದಿಂದಾಗಲಿ.” ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವನೆಯ ನುಡಿಗಳನ್ನಾಡಿದ ಉಪನ್ಯಾಸಕ ಸುಜಯೀಂದ್ರ ಹಂದೆ “ಕುಂದಾಪುರದ ಕುಗ್ರಾಮ ಕೊಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಯಶಸ್ವೀ ಕಲಾವೃಂದ. ಈ ಸಂಸ್ಥೆ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಾ ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ. ಹಳ್ಳಿ ಹಳ್ಳಿಗಳೂ ಸಾಂಸ್ಕೃತಿವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರೆ ಅದು ಒಂದು ದೇಶದ ನಿಜವಾದ ಸಂಪತ್ತು. ಆ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ಕೊಟ್ಟಿದೆ” ಎಂದರು.
ಡಾ. ದೀಪಕ್ ಶೆಟ್ಟಿ ಮಾತನಾಡಿ ನಟಿ ಉಮಾಶ್ರೀ ಯಕ್ಷ ವಲಯಕ್ಕೆ ಬಂದದ್ದು ನಿಜಕ್ಕೂ ಕಲೆಯ ವಿಸ್ತರಣೆಯಾದಂತಾಗಿದೆ. ಉಮಾಶ್ರಿಯವರು ತಾಳಮದ್ದಳೆಯಲ್ಲಿ ಬಹಳ ಮನೋಜ್ಞವಾಗಿ ಭಾಗವಹಿಸಿದ್ದಾರೆ” ಎಂದರು.
ಡಾ. ಕೆ. ಸಿ. ಬಲ್ಲಾಳ್ ಮಾತನಾಡಿ “ತೆಕ್ಕಟ್ಟೆಯ ಹಲವರು ಚಿತ್ರರಂಗದಲ್ಲಿ ಹಾಗೂ ಯಕ್ಷಗಾನದಲ್ಲಿ ವಿಜೃಂಭಿಸಿದ್ದಾರೆ. ಈ ಸಂಸ್ಥೆಯೂ ನೂರಾರು ಕಾಲ ಮೆರೆಯಲಿ” ಎಂದು ಹಾರೈಸಿದರು.
ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹೆರಿಯ ಮಾಸ್ಟರ್ ನಿರ್ವಹಿಸಿದರು. ಹೂವಿನಕೋಲು, ಒಡ್ಡೋಲಗಗಳು, ಗಾನ ವೈಭವ, ವಾಗ್ವಿಲಾಸದ ಯಕ್ಷವಿಶೇಷ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನವನೀತ’ ಪ್ರಸ್ತುತಿಗೊಂಡಿತು.