ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಇದರ ವತಿಯಿಂದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಶ್ವದಾಖಲೆ ಮೂಡಿಸಿರುವ ಹೆಮ್ಮೆಯ ಯುವ ಗಾಯಕರಾದ ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಇವರಿಗೆ ‘ಯಶೋಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಅಪರಾಹ್ನ 4-30 ಗಂಟೆಗೆ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಪ್ರಸಿದ್ಧ ಕೊಂಡೆವೂರು ಸಹೋದರಿಯರಾದ ಕುಮಾರಿ ಗಾಯತ್ರೀ, ಕುಮಾರಿ ಶ್ರಾವಣ್ಯ ಮತ್ತು ಕುಮಾರಿ ಮೋಕ್ಷಪ್ರಭಾ ಇವರಿಂದ ವಯೊಲಿನ್ ಟ್ರಯೋ ಸಂಗೀತ ಕಛೇರಿಗೆ ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಮತ್ತು ಮೋರ್ಸಿಂಗ್ ನಲ್ಲಿ ಸುಧಾಮ ಆಚಾರ್ಯ ಇವರುಗಳು ಸಹಕರಿಸಲಿದ್ದಾರೆ. ‘ಯಶೋಭಿನಂದನೆ’ ಸಮಾರಂಭವನ್ನು ಮಾಜಿ ಮೊಕ್ತೇಸರರಾದ ಮುನಿಯಾಲ್ ದಾಮೋದರ ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದು, ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ ಪಾಂಡೇಶ್ವರ ಇವರು ಶುಭಾಶಂಸನೆ ಗೈಯ್ಯಲಿದ್ದಾರೆ. ನಿರಂತರ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಗೀತೆಗಳನ್ನು ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೂತನ ವಿಶ್ವದಾಖಲೆ ಮೂಡಿಸಿರುವ ಹೆಮ್ಮೆಯ ಯುವ ಗಾಯಕರಾದ ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಇವರನ್ನು ಅಭಿನಂದಿಸಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ವಿದ್ವಾನ್ ಶ್ರೀ ಯಶವಂತ್ ಎಂ.ಜಿ.ಯವರ ಗಾಯನಕ್ಕೆ ವಿಶ್ವಕರ್ಮ ಕಲಾ ಪರಿಷತ್ತಿನ ಪ್ರಸಿದ್ಧ ಚಿತ್ರ ಕಲಾವಿದರಿಂದ ಲೈವ್ ಆರ್ಟ್ ಪ್ರದರ್ಶನಗೊಳ್ಳಲಿದೆ.