ಹೊಸಕೋಟೆ : ಹೊಸಕೋಟೆ ನಿಂಬೆಕಾಯಿಪುರದ ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ತಿಂಗಳ ಎರಡನೇ ಶನಿವಾರದ ನಾಟಕ ಸರಣಿ ‘ರಂಗ ಮಾಲೆ’ ಇದರ 68ನೇ ಕಾರ್ಯಕ್ರಮವು ದಿನಾಂಕ 13-01-2024ರಂದು ನಡೆಯಿತು. ನಾಟಕ ಸರಣಿಯ ಈ ಕಾರ್ಯಕ್ರಮದಲ್ಲಿ ರಷ್ಯನ್ ಲೆeಖಕರಾದ ವಿ. ಯಝೋವ್ ಮತ್ತು ಚುಕ್ರೈ ರಚಿಸಿ, ಸುರೇಶ ಸಂಕೃತಿ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಕ ಎಂ. ಸುರೇಶ್ ನಿರ್ದೇಶಿಸಿದ ‘ಯೋಧಾಂತರ್ಯ’ ನಾಟಕವನ್ನು ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆಯ ಸದಸ್ಯರು ಪ್ರಸ್ತುತಪಡಿಸಿದರು.
ನಾಟಕ ಪ್ರದರ್ಶನ ಉದ್ಘಾಟಿಸಿದ ವೇದಿಕೆಯ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂನಲ್ಲೂರು ಮಾತನಾಡಿ “ಇಂದು ಜಗತ್ತಿನ ಯುದ್ಧ ಮಾನವ ಕುಲದ ನಾಶದ ಮುನ್ನುಡಿ. ಶಾಂತಿ, ನೆಮ್ಮದಿ ಮತ್ತು ಬದುಕು ಕಲಕಿದ ಜಾಗತಿಕ ಯುದ್ಧಗಳ ಕಾಲದ ಮನಸ್ಥಿತಿಯ ಈ ನಾಟಕ ಎಂದಿಗೂ ಪ್ರಸ್ತುತ.” ಎಂದರು.
ನಾಟಕ ಅನುವಾದಕ ಸುರೇಶ್ ಸಂಕೃತಿ ಹಾಗೂ ನಿರ್ದೇಶಕ ಎಂ. ಸುರೇಶ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ ಕೆಂಗನಾಳ, ಸಿದ್ದೇಶ್ವರ ನನಸು ಮನೆ, ಚಲಪತಿ, ಅಗ್ರಹಾರ ಮುನಿರಾಜು ಹಾಜರಿದ್ದರು.
‘ಯೋಧಾಂತರ್ಯ’
ಯುದ್ಧರಂಗದಲ್ಲಿ ಏಕಾಂಗಿ ಹೋರಾಟ ಮಾಡಿ ವೈರಿ ಪಡೆಯನ್ನು ಹಿಮ್ಮೆಟ್ಟಿಸಿ ರೋಚಕತೆ ಮರೆದ ಯೋಧ ತನ್ನ ತಾಯಿಯ ನೋಡ ಬಯಸಿ ವಿಶೇಷ ರಜೆ ಪಡೆದು ತನ್ನೊರಿಗೆ ಹೊರಡುತ್ತಾನೆ. ಬರುವ ದಾರಿಯಲ್ಲಿ ಗಾಯಗೊಂಡ ಸೈನಿಕನೊಬ್ಬ ತನ್ನ ಈ ಸ್ಥಿತಿಯನ್ನು ಕಂಡು ತನ್ನ ಹೆಂಡತಿ ತನ್ನನ್ನು ತಿರಸ್ಕಾರದಿಂದ ನೋಡಬಹುದೆಂದು ತನ್ನನ್ನೇ ಕೊನೆಗಾಣಿಸಿಕೊಳ್ಳಲು ಮನಸ್ಸು ಮಾಡಿದ್ದನ್ನು ಬದಲಾಯಿಸಿ ಸಮಾಜಮುಖಿಯನ್ನಾಗಿ ಮಾಡುತ್ತಾನೆ. ಬರುವ ಟ್ರೇನ್‌ನಲ್ಲಿ ಪರಿಚಿತವಾದ ಯುವತಿಯಲ್ಲಿ ಆಕರ್ಷಣೆಗೊಂಡು ತನ್ನ ತಾಯಿಯನ್ನು ಭೇಟಿ ಆಗಲು ತಡವಾಗಿ ಮನೆ ತಲುಪುತ್ತಾನೆ ಮತ್ತು ತಕ್ಷಣವೇ ಯುದ್ಧ ಭೂಮಿಗೆ ಮರಳುವ ಯೋಧನ ಆಂತರ್ಯ ತಲ್ಲಣಗಳಿಂದ ತುಂಬಿದ ಬದುಕು, ನಶ್ವರತೆ, ಕಾಯುವಿಕೆಗಳಲ್ಲಿ ಕಳೆಯುವ ನಿಗೂಢ ಬದುಕಿನ ಕ್ಷೋಭೆಯ ಪ್ರತಿಬಿಂಬ ಈ ನಾಟಕ.
ರಂಗದ ಮೇಲೆ :
ಅಲ್ಯೂಶಾನಾಗಿ ನಾಗೇಶ್ ಭೋದನಹೊಸಹಳ್ಳಿ, ಶೂರಾನಾಗಿ ಸೋನಿ, ವಾಶ್ಯನಾಗಿ ಸಾಗರ್ ದೀಕ್ಷಿತ್, ಗಾರ್ಡ್‌ಲೇವ್ ನಾಗಿ ಸಿದ್ದೇಶ್ವರ ನನಸುಮನೆ, ತಾನ್ಯ ಹಾಗೂ ಕ್ಯಾಥರೀನಾಳಾಗಿ ಮಮತಾ, ಲೀಝಾ ಮತ್ತು ನತಾಷಳಾಗಿ ಶ್ಯಾಮಲಾ, ನಿಕೋಲೈ, ಸೈನಿಕ ಹಾಗೂ ಪೋಲೀಸ್ ಪಾತ್ರದಲ್ಲಿ ಶ್ರೀ ಚರಣ್, ಜನರಲ್, ಮಾರ್ಕಪೋಲೋ ಮತ್ತು ಸೈನಿಕನ ಪಾತ್ರದಲ್ಲಿ ರಂಜಿತ್, ಸೈನಿಕನಾಗಿ ಹೇಮಂತ್, ಸರಗೈ ಹಾಗೂ ಸೈನಿಕನಾಗಿ ತಿಲಕ್ ಪ್ರೇಕ್ಷಕರನ್ನು ರಂಜಿಸಿದರು.
ರಂಗದ ಹಿಂದೆ :
ಸೆಟ್ಸ್ ಮತ್ತು ಪರಿಕರ ಸಂಯೋಜನೆಯಲ್ಲಿ ಸಂತೋಷ್ ಪಾಂಚಾಲ್, ಪ್ರಸಾದನದಲ್ಲಿ ರಾಮಕೃಷ್ಣ ಬೆಳ್ಳೂರು, ಬೆಳಕಿನ ಸಂಯೋಜನೆಯಲ್ಲಿ ರವಿಶಂಕರ್, ನೃತ್ಯ ಸಂಯೋಜನೆಯಲ್ಲಿ ಪ್ರತಾಪ್, ರಂಗ ನಿರ್ವಹಣೆಯಲ್ಲಿ ಸಾಗರ್ ದೀಕ್ಷಿತ್, ಪ್ರಚಾರದಲ್ಲಿ ಜಗದೀಶ್ ಕೆಂಗನಾಲ್ ಹಾಗೂ ಸಂಗೀತ ನಿರ್ವಹಣೆಯಲ್ಲಿ ನಿತಿನ್ ಹೇಮಂತ್ ಸಹಕರಿಸಿದರು.