ಮಂಗಳೂರು : ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವತಿಯಿಂದ ದಿನಾಂಕ 13 ಜುಲೈ 2025ರ ಭಾನುವಾರದಂದು ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವದ ಬಗ್ಗೆ ಮಾತನಾಡಿದ ಶ್ರೀರಾಮ ಕ್ಷತ್ರಿಯ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ಚಂದ್ರಗಿರಿ “ಈ ಅದ್ಭುತ ಸೃಷ್ಟಿಯಲ್ಲಿ ನಮಗೆ ಅರಿವಿನ ಮೂಲವನ್ನು ತೋರಿಸಿ ನಡೆಸುವವನೇ ಗುರು. ಎಲ್ಲಾ ಕಾಲಘಟ್ಟದಲ್ಲೂ ಗುರುವಿನ ಸ್ಥಾನ ಉಲ್ಲೇಖನೀಯವೇ ಆಗಿದೆ. ಮನಸ್ಸಿಗೆ ಕವಿದ ಮಂಜನ್ನು ಒರಸಿ ಬೆಳಕಿನೆಡೆಗೆ ಗುರು ಒಯ್ಯುತ್ತಾನೆ. ‘ಏಕಕ್ಷರಂ ಕಲಿಸಿದಾತಂ ಗುರು’ ಎಂಬ ಮಾತಿದೆ. ಅಂತೆಯೇ ನಮ್ಮ ಜೀವನದಲ್ಲೂ ಅನೇಕ ಕಡೆ ಅನೇಕ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಅಂತಹಾ ಗುರುಸ್ಥಾನವನ್ನು ಗೌರವಿಸುವುದು ನಮಗೆ ಹೆಮ್ಮೆ” ಎಂದು ವಿವರಿಸಿದರು.
ಶ್ರೀರಾಮಕ್ಷತ್ರಿಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ನಾಗರಾಜ್ ಕೂಡಾ ಗುರುಪೂರ್ಣಿಮೆಯ ಮಹತ್ವದ ಸಂದೇಶ ನೀಡಿದರು. ಶ್ರೀರಾಮಕ್ಷತ್ರಿಯ ಮಹಿಳಾ ಯಕ್ಷ ವೃಂದದ ಸಂಧ್ಯಾ ದಿನೇಶ್ ಪ್ರಾರ್ಥಿಸಿ, ಕಲ್ಪನಾ ವೆಂಕಟೇಶ್ ಸ್ವಾಗತಿಸಿ, ಅಧ್ಯಕ್ಷೆ ವಾರಿಜಾ ಕೊರಗಪ್ಪ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಶಾಲಿನಿ ರಾಮಚಂದ್ರ, ಜಯಲಕ್ಷ್ಮೀ ನರಸಿಂಹ ಹಾಗೂ ಗಾಯತ್ರಿ ಯೋಗೀಶ್ ಇವರು ಸನ್ಮಾನ ನಡೆಸಿಕೊಟ್ಟರು. ಯಕ್ಷ ಭಾಗವತ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಹಾಗೂ ನಾಟ್ಯ ಗುರು ರವಿ ಅಲೆವೂರಾಯ ವರ್ಕಾಡಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.