ಮಂಗಳೂರು : ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಯುವ ಜನತೆಯಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ದಿನಾಂಕ 08 ಮತ್ತು 09 ಫೆಬ್ರವರಿ 2025ರಂದು ‘ಯುವ ಮಹೋತ್ಸವ 2025’ವನ್ನು ಆಯೋಜಿಸಿದೆ. ಈ ಯುವ ಮಹೋತ್ಸವದಲ್ಲಿ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಹಾಗೂ ವಿಜೇತರಿಗೆ ಪುರಸ್ಕಾರ ಸಮಾರಂಭವನ್ನು ಮಂಗಳೂರಿನ ಡಾನ್ ಭಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಇದೊಂದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, ಕೊನೆಯ ಸುತ್ತಿನಲ್ಲಿ 18ರಿಂದ 30 ವರ್ಷದೊಳಗಿನ 24 ಯುವ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ನೋಂದಾಯಿತ ಸ್ಪರ್ಧಿಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿ ಕೊನೆಯ ಸುತ್ತಿನ ಸ್ಪರ್ಧೆಗೆ 24 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ವಾದ್ಯ ವಾದನ (ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಇದ್ದು, ಪ್ರಥಮ ಸ್ಥಾನಿಗೆ ರೂ.60,000/-, ದ್ವಿತೀಯ ಸ್ಥಾನಿಗೆ ರೂ.40,000/- ಹಾಗೂ ತೃತೀಯ ಸ್ಥಾನಿಗೆ ರೂ.20,000/- ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ವಿಜೇತರಿಗೆ ಸ್ವರ ಭಾರತಿ ಬಿರುದು ಪ್ರದಾನ ಮಾಡಲಾಗುವುದು.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಪಂಡಿತ್ ರೋನು ಮುಜುಂದಾರ್, ಉಸ್ತಾದ್ ರಫೀಕ್ ಖಾನ್, ಪಂಡಿತ್ ಜಯತೀರ್ಥ ಮೇವುಂಡಿ, ಪ್ರಖ್ಯಾತ ಯುವ ತಬ್ಲಾ ವಾದಕ ಪಂಡಿತ್ ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್ ಹಾಗೂ ಪ್ರಖ್ಯಾತ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಇವರ ತಂಡವು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಲಿದ್ದು, ಎರಡೂ ವಿಭಾಗಗಳ ಅಂತಿಮ ಸುತ್ತಿನ ಸ್ಪರ್ಧೆಯು 08 ಫೆಬ್ರವರಿ 2025ರಂದು ಬೆಳಗ್ಗೆ 8-30 ಗಂಟೆಗೆ ನಡೆಯಲಿದೆ.
ದಿನಾಂಕ 09 ಫೆಬ್ರವರಿ 2025ರಂದು ಈ ‘ಯುವ ಮಹೋತ್ಸವ 2025ರ ಭಾಗವಾಗಿ ನಡೆಯುವ ಮಾಸ್ಟರ್ ತರಗತಿಗಳ ಮೂಲಕ ಭಾರತದ ಪ್ರಮುಖ ಸಂಗೀತಗಾರರಿಂದ ಸಂಗೀತ ಕಲಿಯಲು ಯುವ ಜನರಿಗೆ ಸಂಗೀತ ಭಾರತಿ ಫೌಂಡೇಶನ್ ಅವಕಾಶವನ್ನು ನೀಡುತ್ತಿದೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಅನನ್ಯ ಅವಕಾಶವಾಗಿದೆ. ಉಸ್ತಾದ್ ರಫೀಕ್ ಖಾನ್, ಡಾ. ಶಶಾಂಕ್ ಮಕ್ತೇದಾರ್ ಹಾಗೂ ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಇವರು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ.
ಗಾಯನ ತರಗತಿಯನ್ನು ನಡೆಸಿಕೊಡಲಿರುವ ಗೋವಾದ ಡಾ. ಶಶಾಂಕ್ ಮಕ್ತೇದಾರ್ ಇವರು ಪಂಡಿತ್ ಉಲ್ಲಾಸ್ ಕಶಾಲ್‌ಕರ್ ರವರ ಶಿಷ್ಯರಾಗಿದ್ದಾರೆ. ಶುದ್ಧ ಶಾಸ್ತ್ರೀಯ ಸಂಗೀತ, ಹೊಸ ಹೊಸ ಕೌಶಲ್ಯಗಳ ಅಳವಡಿಕೆ, ಹಾಡನ್ನು ಪ್ರಸ್ತುತ ಪಡಿಸುವ ಗಾಯನ ಶೈಲಿಯಿಂದ ಖ್ಯಾತಿ ಪಡೆದಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಭಟ್ ಕುಲಕರ್ಣಿಯವರು ಖ್ಯಾತ ಗಾಯಕಿ, ಪಂಡಿತ್ ಬಸವರಾಜ ರಾಜಗುರುರವರ ಶಿಷ್ಯೆ. ಶಾಸ್ತ್ರೀಯ ಸಂಗೀತ, ಭಕ್ತಿ ಗೀತೆ ಸೇರಿದಂತೆ ಹಲವು ಗೀತೆ ಪ್ರಕಾರಗಳನ್ನು ಅನೇಕ ಬಾರಿ ಪ್ರಸ್ತುತ ಪಡಿಸಿರುತ್ತಾರೆ. ವಾದ್ಯ ಸಂಗೀತ ತರಗತಿ ನಡೆಸಿಕೊಡಲಿರುವ ಉಸ್ತಾದ್ ರಫೀಕ್ ಖಾನ್ ಇವರು, ಧಾರವಾಡ ಘರಾನಾದ ಆರನೇ ತಲೆಮಾರಿನ ಸಿತಾರ್ ವಾದಕ, ಇವರ ಶುದ್ಧ ಮಾಧುರ್ಯ, ಅನುಕರಣೀಯ ತಂತ್ರಗಾರಿಕೆಯಿಂದ ಹೆಸರುವಾಸಿಯಾಗಿದ್ದಾರೆ. ಈ ಸಂಗೀತ ವಿಶೇಷ ತರಗತಿಗಳಲ್ಲಿ ಭಾಗವಹಿಸಲು ಇಚ್ಛಿಸುವ ಸಂಗೀತಾಸಕ್ತರು ಮತ್ತು ಸಂಗೀತ ವಿದ್ಯಾರ್ಥಿಗಳು masterclass.sangeetbharati.org ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ಶುಲ್ಕ ರೂ.500/- ಆಗಿರುತ್ತದೆ.
ಸಂಜೆ 4-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯುವ ಮಹೋತ್ಸವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಪ್ರಥಮ ಸ್ಥಾನಿಗಳಿಗೆ ಬಿರುದು ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮುಂಬೈನ ಪಂಡಿತ್ ರೋನು ಮುಜುಂದಾರ್, ಹುಬ್ಬಳ್ಳಿಯ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಇವರ ಬಾನ್ಸುರಿ-ಗಾಯನ-ಸಿತಾರ್ ಜುಗಲ್ ಬಂಧಿ ಕಾರ್ಯಕ್ರಮ ನಡೆಯಲಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮುಂಬೈನ ಪಂಡಿತ್ ಯಶವಂತ್ ವೈಷ್ಣವ್ ತಬ್ಲಾದಲ್ಲಿ ಹಾಗೂ ಪ್ರೊ. ನರೇಂದ್ರ ಎಲ್. ನಾಯಕ್ ಹಾರ್ಮೊನಿಯಂನಲ್ಲಿ ಸಹಕಾರ ನೀಡಲಿದ್ದಾರೆ.