ಕೋಲ್ಕತ್ತಾ : ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಯುವ ಪುರಸ್ಕಾರಕ್ಕೆ ಕವಿ ಆರಿಫ್ ರಾಜಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂಪಾಯಿ 51 ಸಾವಿರ ನಗದು ಬಹುಮಾನ ಒಳಗೊಂಡಿದೆ.
ದಿನಾಂಕ 20-04-2024ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷೆ ಕುಸುಮ್ ಖೇಮಾಣಿ ತಿಳಿಸಿದ್ದಾರೆ.
ಸೈತಾನನ ಪ್ರವಾದಿ, ಜಂಗಮ ಫಕೀರನ ಜೋಳಿಗೆ, ಬೆಂಕಿಗೆ ತೊಡಿಸಿದ ಬಟ್ಟೆ, ನಕ್ಷತ್ರ ಮೋಹ, ಎದೆ ಹಾಲಿನ ಪಾಳಿ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಆರಿಫ್ ಅವರ ಹಲವು ಕವಿತೆಗಳು ಇಂಗ್ಲಿಷ್, ಸ್ಪ್ಯಾನಿಷ್, ಪರ್ಷಿಯನ್, ಗ್ರೀಕ್, ಅಲ್ಬೇನಿಯನ್, ಟರ್ಕಿಷ್ ಸೇರಿ ದೇಶದ ತಮಿಳು, ತೆಲುಗು, ಮಲಯಾಳಂ, ಹಿಂದಿ ಅಲ್ಲದೇ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕವಿತೆಗಳು ದಾವಣಗೆರೆ, ಮಂಗಳೂರು, ಶಿವಮೊಗ್ಗ, ಮೈಸೂರು, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸೇರಿ ಕರ್ನಾಟಕ ಪಿ. ಯು. ಮಂಡಳಿಯ ಪ್ರಥಮ ಪಿಯುಸಿಗೆ ಪಠ್ಯವಾಗಿವೆ.
ಇವರ ಸಾಹಿತ್ಯ ಸಾಧನೆಗೆ ಬೇಂದ್ರೆ ಪುಸ್ತಕ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅರಳು ಸಾಹಿತ್ಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.