ಮಂಗಳೂರು : ಸಂಗೀತ ಪರಿಷತ್ತಿನ ತ್ರಿಂಶತ್ ಸಂಭ್ರಮದ ಪ್ರಯುಕ್ತ ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 24-09-2023ರಂದು ‘ಯುವ ಸಂಗೀತೋತ್ಸವ’ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಜರಗಿತು.
ಸ್ಥಳೀಯ ಮತ್ತು ಕಾಸರಗೋಡು, ಕಾರ್ಕಳ, ಧರ್ಮಸ್ಥಳ, ಪುತ್ತೂರು, ಸುರತ್ಕಲ್ ಮತ್ತು ಬೆಳ್ಳಾರೆಯ ಹನ್ನೊಂದು ಮಂದಿ ಸಂಗೀತಗಾರರ ಪ್ರತಿಭೆ ಪ್ರದರ್ಶಿಸಲು ಉತ್ಸವ ವೇದಿಕೆಯಾಯಿತು. ಪ್ರತಿ ಒಂದೂವರೆ ಗಂಟೆ ಅವಧಿಯ ಕಛೇರಿಯಲ್ಲಿ ಮೃದಂಗ, ವಯೊಲಿನ್ ವಾದನದಲ್ಲಿ ಗಾಯಕರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಪ್ರೇಕ್ಷಕರು ನಾದದ ಅಲೆಯಲ್ಲಿ ಮಿಂದರು.
ಸಂಗೀತ ಪರಿಷತ್ತಿನ ಅಧ್ಯಕ್ಷ ಎಂ.ವಿ. ಪ್ರದೀಪ ಮಾತನಾಡಿ “1993ರಲ್ಲಿ ಆರಂಭವಾದ ಸಂಸ್ಥೆಗೆ 30 ವರ್ಷ ತುಂಬಿದ್ದು, ತ್ರಿಂಶತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನಲ್ಲದೆ ತಿಂಗಳ ಕಾರ್ಯಕ್ರಮ, ಶ್ರಾವಣ ಸಂಗೀತೋತ್ಸವ, ಆರಾಧನಾ ಮಹೋತ್ಸವ, ಐದು ದಿನಗಳ ಸಂಗೀತ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ” ಎಂದರು.
ಮ್ಯಾಪ್ಸ್ ಕಾಲೇಜು ವಿದ್ಯಾರ್ಥಿ, ವಯೊಲಿನ್ ವಾದಕ ಗೌತಮ್ ಮಾತನಾಡಿ, “ಸಂಗೀತ ಪರಿಷತ್ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ” ಎಂದರು. ಉಪಾಧ್ಯಕ್ಷ ಎಚ್. ಸುಬ್ರಹ್ಮಣ್ಯ ರಾವ್, ಕಾರ್ಯದರ್ಶಿ ಮೋಹನದಾಸ್ ಎ.ಎನ್, ಕೋಶಾಧಿಕಾರಿ ಸುಬ್ರಹ್ಮಣ್ಯ ಉಡುಪ, ಸದಸ್ಯ ಹರೀಶ್ ರಾವ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಅಶ್ವಿನಿ ನಿರೂಪಿಸಿದರು.