ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅವರ 136ನೆಯ ಜಯಂತಿ ಕಾರ್ಯಕ್ರಮವು ದಿನಾಂಕ 05-06-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಮಾತೃಸಂಸ್ಥೆಯಾಗಿ ಈ ವಿಸ್ತಾರವನ್ನು ಪಡೆದು ಬೆಳೆಯುವುದಕ್ಕೆ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಕೊಡುಗೆ ಬಹಳ ಮಹತ್ವದ್ದು. ಸಂಸ್ಥೆಯ ನಿಬಂಧನೆ ಎಂಬುದು ಸಂಸ್ಥೆಗೆ ದಿಕ್ಸೂಚಿ–ಅಂಕುಶವಿದ್ದಂತೆ. ಅದು ಸಕಾಲಿಕವಾಗಿರಬೇಕು, ಸಮರ್ಪಕವಾಗಿರಬೇಕು ಮತ್ತು ಸಮಗ್ರವಾಗಿರಬೇಕು ಎಂದು ಅದುವರೆಗೆ ಹಲವಾರು ವಾರ್ಷಿಕಾಧಿವೇಶನಗಳಲ್ಲಿ ಆಗಿದ್ದ ನಿಬಂಧನೆಯ ತಿದ್ದುಪಡಿಗಳನ್ನೆಲ್ಲ ಸೇರ್ಪಡೆ ಮಾಡಿ ಒಂದೂಗೂಡಿಸಿ ನಿಬಂಧನಾವಳಿಯನ್ನು ಪ್ರಕಟಿಸಿದ್ದು ಅವರ ಮಹತ್ವದ ಸಾಧನೆ. ಪರಿಷತ್ತಿನ ಕಾರ್ಯಾಲಯವನ್ನು ಪುನರ್ಘಟಿಸಿ ವ್ಯವಸ್ಥಿತಗೊಳಿಸಿ ಸಮಯ ಪಾಲನೆ, ವೇಷಭೂಷಣಗಳಲ್ಲಿ ಶಿಸ್ತನ್ನು ತಂದರು. ಪ್ರತಿವಾರವೂ ಸಾರ್ವಜನಿಕ ಕಾರ್ಯಕ್ರಮವಾಗಿ ಉಪನ್ಯಾಸ, ಕಾವ್ಯವಾಚನಗಳ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದಕ್ಕೆ ಪರಿಷತ್ತಿಗೆ ಬರುವ ಜನರು ಹೆಚ್ಚಾದರು. ಇವರ ಕಾಲದಲ್ಲಿ ವಸಂತೋತ್ಸವ ಕಾರ್ಯಕ್ರಮವನ್ನು ಬೇಸಿಗೆ ಕಾಲದಲ್ಲಿ ನಡೆಸುವ ಪದ್ಧತಿಯನ್ನು ಜಾರಿಗೆ ತಂದಾಗ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನವೀನ ಉಪನ್ಯಾಸಗಳ ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದ್ದರು. ಮನೋವಿಲಾಸದ ಈ ಕಾರ್ಯಕ್ರಮದಲ್ಲೇ ಮನೋವಿಕಾಸದ ಅಂಗವಾಗಿ ಕನ್ನಡ ಗ್ರಂಥ ಪ್ರದರ್ಶನ ಏರ್ಪಾಟಾಯಿತು. ಜನರಿಗೆ ವಿನೂತನ ಅನುಭವವನ್ನು ಆ ಪ್ರದರ್ಶನ ಒದಗಿಸಿತು ಎಂದು ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಶ್ರೀಮದ್ ಯವರಾಜರಿಗೆ ಚಿತ್ರಕಲೆಯಲ್ಲಿ ಉತ್ತಮ ಅಭಿರುಚಿ ಇತ್ತು. ಅವರು ಭರತನಾಟ್ಯ, ಮಣಿಪುರಿ, ಕಥಕ್ಕಳಿ ಮುಂತಾದ ನೃತ್ಯಗಳನ್ನು ಬಲ್ಲವರಾಗಿದ್ದರು. ಪಾಶ್ಚಾತ್ಯ ಸಂಗೀತವನ್ನು ಬಲ್ಲವರಾಗಿದ್ದ ಅವರು ಬ್ಯಾಂಡ್ ಸಂಗೀತವನ್ನು ಮೈಸೂರು ಅರಮನೆಗೆ ಪರಿಚಯ ಮಾಡಿ ಕೊಟ್ಟರು. ವೀಣೆ ಮತ್ತು ಪಿಯಾನೋವನ್ನು ಸೊಗಸಾಗಿ ನುಡಿಸಬಲ್ಲವರಾಗಿದ್ದರು. ಸಿನಿಮಾದಲ್ಲಿಯೂ ಆಸಕ್ತರಾಗಿದ್ದ ಅವರ ಪ್ರೋತ್ಸಾಹದಲ್ಲಿಯೇ ಟಿ.ಪಿ. ಕೈಲಾಸಂ ಮೃಚ್ಛಕಟಿಕ ಮೂಕಿ ಚಿತ್ರವನ್ನು ರೂಪಿಸಿದ್ದರು. ಗುಬ್ಬಿ ಕಂಪನಿಯು ಸಂಕಷ್ಟದಲ್ಲಿ ಸಿಲುಕಿದಾಗ ಯುವರಾಜರು ನೆರವಿಗೆ ಬಂದು ಕಂಪನಿಯ ಬೆಳವಣಿಗೆಗೆ ಕಾರಣರಾದರು” ಎಂದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಪ್ರೊ. ನಟರಾಜ್ ಮತ್ತು ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.