Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಗಂಧರ್ವಾಂಶ ಸಂಭೂತ ಆರ್. ಎಸ್. ಕೇಶವಮೂರ್ತಿ
    Article

    ವಿಶೇಷ ಲೇಖನ – ಗಂಧರ್ವಾಂಶ ಸಂಭೂತ ಆರ್. ಎಸ್. ಕೇಶವಮೂರ್ತಿ

    March 4, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

     

    ಆರ್. ಎಸ್. ಕೇಶವಮೂರ್ತಿ ಎಂದೇ ಪ್ರಸಿದ್ಧರಾದ ರುದ್ರಪಟ್ಣ ಸುಬ್ಬರಾಯ ಕೇಶವಮೂರ್ತಿಗಳು, ಪ್ರಸಿದ್ಧ ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. 1903 ಮಾರ್ಚ್ 4 ರಂದು ಬೇಲೂರಿನ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ ಸುಪುತ್ರ. ರುದ್ರಪಟ್ಣ ಸುಬ್ಬರಾಯರು 24 ತಲೆಮಾರುಗಳ ವೈಣಿಕ ವಂಶಜರಾದ ರುದ್ರಪಟ್ಣ ಸುಬ್ಬರಾಯರು ವೃತ್ತಿಯಲ್ಲಿ ಶಾಲೆಯ ಸಂಗೀತ ಅಧ್ಯಾಪಕರಾಗಿದ್ದರು. ಈ ಸಂಗೀತದ ಅಭಿರುಚಿ ತಲೆಮಾರುಗಳಿಂದ ಮುಂದುವರಿದುಕೊಂಡು ಕೇಶವಮೂರ್ತಿಗಳಲ್ಲೂ ಮನೆ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚು ಒಲವು ಇದ್ದ ಇವರು, ತಂದೆಯವರ ಬಳಿಯೇ ವೀಣೆಯ ಆರಂಭದ ಪಾಠ ಕಲಿತರು. ಮುಂದೆ ಮೈಸೂರಿನಲ್ಲಿ ಅವರ ಬಂಧುಗಳಾದ ರಾಯಪ್ಪನವರ ಮನೆಯಲ್ಲಿ ಉಳಕೊಳ್ಳುವ ಅನಿವಾರ್ಯತೆ ಒದಗಿ ಬಂದಾಗ ಪಕ್ಕದ ಮನೆಗೆ ವೀಣೆ ಪಾಠಕ್ಕೆ ಬರುತ್ತಿದ್ದ ವೀಣೆ ಸುಬ್ಬಣ್ಣನವರ ಕಲಾ ಪಾಂಡಿತ್ಯ ತಿಳಿದ ಕೇಶವಮೂರ್ತಿಗಳು ಒಂದು ದಿನ ಅವರ ಪಾದಗಳಿಗೆ ನಮಸ್ಕರಿಸಿ, ತಮ್ಮ ಮನಸ್ಸಿನ ಅದಮ್ಯ ಬಯಕೆಯನ್ನು ಅರಿಕೆ ಮಾಡಿಕೊಂಡರು. ಸುಬ್ಬಣ್ಣನವರು ಎಲ್ಲವನ್ನು ಕೇಳಿಸಿಕೊಂಡ ನಂತರ ಮೌನದಿಂದಲೇ ನಗುತ್ತಾ ಆಶೀರ್ವಾದ ಮಾಡಿದರು ಮತ್ತು ತಮ್ಮ ಮನೆಯಲ್ಲಿಯೇ ವೀಣೆ ಅಭ್ಯಾಸ ಮಾಡುವಂತೆ ಹೇಳಿದರು. ಅದರಂತೆಯೇ ಕೇಶವಮೂರ್ತಿಗಳು  ಪ್ರತಿನಿತ್ಯ ಸುಬ್ಬಣ್ಣನವರ ಮನೆಗೆ ಹೋಗಿ ಅವರ ಪತ್ನಿಯ ಕೆಲಸಗಳಲ್ಲಿ ಸಹಾಯ ಮಾಡಿ, ಅಲ್ಲಿಯ  ಗ್ರಂಥ ಭಂಡಾರದಿಂದ ರಚನೆಗಳನ್ನು ಆಯ್ದು ನುಡಿಸುತ್ತಿದ್ದರು. ಹೀಗೆ ಹಲವಾರು ವರ್ಷ ಗುರು ಸೇವೆಯೊಂದಿಗೆ ನಿರಂತರ ಸಾಧನೆ ಮಾಡಿ ತಮ್ಮದೇ ಆದ ಒಂದು ಶೈಲಿಯನ್ನು ರೂಢಿಸುವಲ್ಲಿ ಸಾರ್ಥಕತೆಯನ್ನು ಪಡೆದರು. ಕೇಶವಮೂರ್ತಿಯವರ ಅದ್ಭುತವಾದ ಸಾಧನೆ ಹಾಗೂ ಪರಿಶ್ರಮದ ಫಲ ಸ್ವರೂಪವಾಗಿ ವೀಣಾ ವಾದನದಲ್ಲಿ ಅವರು ತೋರಿದ ಪ್ರಾವೀಣ್ಯತೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. 1929ರಲ್ಲಿ ಬಿಡಾರಂ ಕೃಷ್ಣಪ್ಪನವರು ಮೈಸೂರಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದಾಗ, ಅಲ್ಲಿ ಪ್ರಥಮ ಕಚೇರಿ ನಡೆಸಿದ ಖ್ಯಾತಿ ಕೇಶವಮೂರ್ತಿಯವರದು. ಆ ಕಚೇರಿಗೆ ಆಗಮಿಸಿದ ಅತ್ಯಂತ ಹಿರಿಯ ಕಲಾವಿದರು ಮತ್ತು ಸಮಾಜ ಪೋಷಕರನ್ನು  ತಮ್ಮ ವೀಣಾ ವಾದನದ ಅಪೂರ್ವ ಪಾಂಡಿತ್ಯದಿಂದ ಮಂತ್ರ ಮುಗ್ಧರನಾಗಿಸಿದವರು  ಕೇಶವಮೂರ್ತಿಗಳು. “ಇಂಥ ದಿವ್ಯ ವಾದನವನ್ನು ಕೇಳಲು ಶೇಷಣ್ಣನವರು ಬದುಕಿಲ್ಲವಲ್ಲ” ಎಂದು ಸುಬ್ಬಣ್ಣನವರು ತಮ್ಮ ಆಂತರ್ಯದ  ಮಾತನ್ನು ಉಸುರಿದ್ದರಂತೆ. ಗುರುಗಳ ಅನುಗ್ರಹ ಮತ್ತು ತಮ್ಮ ಸಂಪೂರ್ಣ ಪರಿಶ್ರಮದಿಂದ ಆರಂಭವಾದ ನಾದ ಸರಸ್ವತಿಯ ಆರಾಧನೆ ನಿರಂತರವಾಗಿ ಮುಂದುವರಿಯುತ್ತಲೇ ಹೋಯಿತು. ಭಾರತದ ಅತ್ಯಂತ ಹಲವಾರು ಮಹಾರಾಜರುಗಳ ಸಮ್ಮುಖದಲ್ಲಿ ಯಶಸ್ವೀ ಕಚೇರಿಗಳನ್ನು ನೀಡಿ ಗೌರವಕ್ಕೆ ಪಾತ್ರರಾದ ಕೇಶವ ಮೂರ್ತಿಗಳು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.

     

    ಗುರುಗಳ ಬಗ್ಗೆ ಅಪಾರ ಗೌರವವಿದ್ದ ಕೇಶವಮೂರ್ತಿಗಳು, “ಸಾಧನೆಯಿಂದ ಸಿದ್ಧಿ, ಸಿದ್ಧಿಯಿಂದ ಪ್ರಸಿದ್ಧಿ, ಅಸಾಧ್ಯವಾದುದು ಯಾವುದೂ ಇಲ್ಲ” ಎಂಬ ಮಾತನ್ನು ಪದೇ ಪದೇ ಹೇಳುವುದರೊಂದಿಗೆ ಸಾಧಿಸಿ ತೋರಿಸಿದವರು. ವೀಣೆಯ ನಾದ ಮಾಧುರ್ಯವನ್ನು ಹೆಚ್ಚಿಸಲು ಧ್ವನಿವರ್ಧಕ ಸಾಧನಗಳಿಲ್ಲದ ಆ ಕಾಲದಲ್ಲಿ ಘಟ್ಟದಲ್ಲಿ ಸಂಶೋಧನೆ ನಡೆಸಿ, ವೀಣೆಯ ನಾದವನ್ನು ಹೆಚ್ಚಿಸಲು 24 ತಂತಿಗಳ ವೀಣೆಯನ್ನು ಮೊತ್ತ ಮೊದಲಿಗೆ ರಚಿಸಿದ ಸಾಧಕರು ಕೇಶವಮೂರ್ತಿಗಳು. ಪಿಟೀಲು, ಕೊಳಲು, ಜಲತರಂಗ, ಪಿಯಾನೋ ಇತ್ಯಾದಿ ಅನೇಕ ಸಂಗೀತ ಪರಿಕರಗಳನ್ನು ನುಡಿಸುತ್ತಿದ್ದ ಅನುಭವಿಯಾದ ಇವರು ಭಾರತದಾದ್ಯಂತ ಪ್ರವಾಸ ಮಾಡಿ ತಮ್ಮ ವೀಣಾವಾದನದ ರಸದೌತಣವನ್ನು ಎಲ್ಲೆಡೆ ಹಂಚಿದವರು. ವಿಶ್ವಕವಿ ರವೀಂದ್ರನಾಥ ಟ್ಯಾಗೂರರು ಇವರ ಪ್ರತಿಭೆಗೆ ಮಾರುಹೋಗಿ ತಮ್ಮೊಂದಿಗೆ ವಿಶ್ವಪರ್ಯಟನೆ ಮಾಡಲು ಆಹ್ವಾನಿಸಿದರು. ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಇವರ ಪ್ರತಿಭೆ ಎಲ್ಲೆಡೆ ಪಸರಿಸಲಿ ಎಂಬ ಉದ್ದೇಶದಿಂದ 1957ರಲ್ಲಿ ಯುನೆಸ್ಕೊಗೆ ಕಳುಹಿಸಲು ಮುಂದೆ ಬಂದರು . ಈ ಎರಡು ಸಂದರ್ಭಗಳಲ್ಲಿಯೂ ಮಡಿವಂತಿಕೆಯ ಕಾರಣದಿಂದ ಕೇಶವಮೂರ್ತಿಗಳು ಹೋಗಲು ಒಪ್ಪಲಿಲ್ಲ ಎಂಬ ಪ್ರತೀತಿ ಇದೆ. ಅಪ್ರತಿಮ ಕಲಾವಿದರಾದ ಇವರು ಅಬ್ದುಲ್ ಕರೀಂಖಾನರ ಬಳಿ ಕೆಲಕಾಲ ಮಾರ್ಗದರ್ಶನ ಪಡೆದ ಇವರ ಪ್ರತಿಭೆಯನ್ನು ಪರಿಗಣಿಸಿ ವೀಣಾ ವಾದನವನ್ನು ಕೇಳಿ ಆನಂದಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು 1935ರಲ್ಲಿ ಇವರನ್ನು ಆಸ್ಥಾನ ವಿದ್ವಾಂಸರಾಗಿ ಮಾಡಿದರು.ಸ್ವದೇಶ ಇದ್ದುಕೊಂಡೇ ಲಂಡನ್ನಿನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಪಾಶ್ಚಾತ್ಯ ಸಂಗೀತವನ್ನು ಅಧ್ಯಯನ ಮಾಡಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಧೀಮಂತ.

    ಒಂದು ಬಾರಿ ಭಾರತ ಕೋಗಿಲೆ ಎಂದೇ ಪ್ರಸಿದ್ಧರಾದ ಸರೋಜಿನಿ ನಾಯ್ಡು ಅವರ ಕೇಳಿಕೆಯಂತೆ ಮಹಾತ್ಮಗಾಂಧಿಯವರ ಮುಂದೆ ವೀಣೆ ನುಡಿಸಲು ಕೇಶವಮೂರ್ತಿಗಳು ಸಂತೋಷದಿಂದ ಒಪ್ಪಿಕೊಂಡರು. ಆಹ್ವಾನಿತ ಶ್ರೋತೃಗಳೆಲ್ಲರೂ ತನ್ಮಯ ಚಿತ್ತರಾಗಿ ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಲು ಕಾರ್ಯಕ್ರಮ ನಡೆಯುವ ಮುಂಬೈನ ಬಿರ್ಲಾ  ಸಭಾಂಗಣದ  ದೀಪಗಳನ್ನೆಲ್ಲ ಆರಿಸಲಾಗಿತ್ತು. ಇದರಿಂದ ಸ್ಫೂರ್ತಿಗೊಂಡ ಕೇಶವ ಮೂರ್ತಿಯವರು ಎಂದಿಗಿಂತಲೂ ಹೆಚ್ಚು ತಲ್ಲಿನರಾಗಿ ವೀಣೆ ನುಡಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರು ತಮ್ಮ ಸ್ವಂತ ಕೈಯಿಂದ ನೇಯ್ಗೆ ಮಾಡಿರುವ ಖಾದಿ ಜಮಖಾನೆಯನ್ನು ಮೆಚ್ಚುಗೆ ಕು ರುಹಾಗಿ ಮೂರ್ತಿಗಳಿಗೆ ನೀಡಿದರು, ಮೂರ್ತಿಯವರು ಅದನ್ನು ಬಹಳ ಸಂತೋಷದಿಂದ ಸ್ವೀಕರಿಸಿದರು. 1927ರಲ್ಲಿ ತಮ್ಮ 24ನೆಯ ವಯಸ್ಸಿನಲ್ಲಿ ಕೇಶವಮೂರ್ತಿಗಳು ವೆಂಕಟ ಲಕ್ಷ್ಮಮ್ಮ ಎಂಬುವರನ್ನು ವಿವಾಹವಾಗಿ, ಸುಖ ದುಃಖವನ್ನು ಸಮಾನವಾಗಿ ಹಂಚಿಕೊಂಡು ಸಹಬಾಳ್ವೆಯನ್ನು ನಡೆಸಿದರು.

    ಮೇರು ಕಲಾವಿದರಾದ ಕೇಶವಮೂರ್ತಿಗಳ ಕಲಾಪ್ರೌಢಿಮೆಗೆ ದೊರೆತ ಪ್ರಶಸ್ತಿ – ಪುರಸ್ಕಾರಗಳು ಅನೇಕ. 1967ರ ದಸರಾ ಮಹೋತ್ಸವದ ವಿಜಯದಶಮಿಯಂದು ಜಯಚಾಮರಾಜೇಂದ್ರ ಒಡೆಯರು ಮೂರ್ತಿಗಳ ಬಹುಮುಖ ಪ್ರತಿಭೆಗೆ ‘ವೈಣಿಕ ಪ್ರವೀಣ’ ಬಿರುದನ್ನು ನೀಡಿ ‘ಗಂಡಭೇರುಂಡ’ ಪದಕದಿಂದ ಅಲಂಕರಿಸಿದರು. ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾದ ಮೂರ್ತಿಗಳಿಗೆ ‘ಗಾನ ಕಲಾಭೂಷಣ’ ಪ್ರಶಸ್ತಿ ಮತ್ತು ‘ಸ್ವರ್ಣಪದಕ’ ದ ಗೌರವ ಮತ್ತು 1978ರಲ್ಲಿ ವಿಶಾಖ ಸಂಗೀತ ಅಕಾಡೆಮಿಯಿಂದ ‘ಸಂಗೀತ ಕಲಾಸಾಗರ’ ಬಿರುದು ನೀಡಿ ಇವರ ಪ್ರತಿಭೆಯನ್ನು ಗೌರವಿಸಲಾಯಿತು. ‘ಯಥಾ ಗುರು ತಥಾ ಶಿಷ್ಯ’ಎಂಬ ಉಕ್ತಿಯಂತೆ ಕೇಶವಮೂರ್ತಿಗಳು  ತಮ್ಮ ಗುರುವಿನಂತೆ ಶಿಷ್ಯರ ಬಗ್ಗೆ ಅತಿಯಾದ ಪ್ರೀತಿಯನಿಟ್ಟುಕೊಂಡಿದ್ದರು. ‘ಸಂಗೀತಶಾಸ್ತ್ರ ಜ್ಞಾನ ಪ್ರಚೋದಿನಿ’ ಗ್ರಂಥಕರ್ತರಾದ ವೈಣಿಕ ವಿದ್ವಾಂಸ ಎಚ್.ಎಸ್. ಕೃಷ್ಣಮೂರ್ತಿ ಇವರ ಅತ್ಯಂತ ಆಪ್ತ ಶಿಷ್ಯರು. ಕೇಶವ ಮೂರ್ತಿಯವರ 11 ಮಂದಿ ಪುತ್ರರು ಸಂಗೀತದ ಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಿದವರು. ಇವರ ಪುತ್ರ ಆರ್.ಕೆ.ಶ್ರೀನಿವಾಸಮೂರ್ತಿಯವರು ದೇಶದ ಪ್ರಸಿದ್ಧ ವೀಣಾವಾದಕರಲ್ಲಿ ಒಬ್ಬರು. ಎರಡನೆಯ ಪುತ್ರ ಆರ್. ಕೆ .ಸೂರ್ಯನಾರಾಯಣ ಇವರು ತಮ್ಮ ಅಪ್ರತಿಮ ಸಾಧನೆಯಿಂದ ವಾಗ್ಗೇಯಕಾರರಾಗಿ ತಮ್ಮೊಂದಿಗೆ ಗುರುಗಳ ಖ್ಯಾತಿಯನ್ನೂ ದೇಶ ವಿದೇಶಗಳಲ್ಲಿ ಉತ್ತುಂಗಕ್ಕೆ ಏರಿಸಿದವರು.

    ಸದಾ ಲವಲವಿಕೆಯಿಂದ ಇರುತ್ತಿದ್ದ ಕೇಶವಮೂರ್ತಿಗಳು ಎಂದೂ ಅನಾರೋಗ್ಯದ ಕಾರಣದಿಂದ ಮಲಗಿದವರಲ್ಲ.  ಆದರೆ ನಂಬಲಸಾಧ್ಯವೆಂಬಂತೆ 1982ರ ಡಿಸೆಂಬರ್ 17ರಂದು ತಮ್ಮ 79ನೇ ವಯಸ್ಸಿನಲ್ಲಿ  ಬೆಂಗಳೂರಿನಲ್ಲಿ ಅಪಘಾತದಲ್ಲಿ ನಿಧನರಾದರು.

    ವೀಣಾವಾದನದಲ್ಲಿ ಅಪ್ರತಿಮ ಸಾಧನೆ ಮಾಡಿ ಕಲಾಲೋಕವನ್ನು ಶ್ರೀಮಂತಗೊಳಿಸಿದ ಈ ಮಹಾ ಚೇತನಕ್ಕೆ ಗೌರವದ ನಮನಗಳು

                                                        – ಅಕ್ಷರೀ 

    article Birthday Music
    Share. Facebook Twitter Pinterest LinkedIn Tumblr WhatsApp Email
    Previous Articleಸಿವಗಂಗ ರಂಗಮಂದಿರದಲ್ಲಿ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರ | ಏಪ್ರಿಲ್ 06
    Next Article ಕೊಡಗಿನ ಚಿತ್ರಶಿಲ್ಪ ಕಲಾವಿದ ಶ್ರೀ ಬಿ.ಕೆ. ಗಣೇಶ್ ರೈಯವರ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.