ಉಡುಪಿ: ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಚಾತುರ್ಮಾಸ್ಯ ವ್ರತಾಚಾರಣೆಯ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ‘ಶ್ರೀರಾಮ ಕಾರುಣ್ಯ ಕಲಾಸಂಘ’ದ ದಶಮಾನೋತ್ಸವ ಕಾರ್ಯಕ್ರಮವು 08 ಆಗಸ್ಟ್ 2024ರಂದು ಭಟ್ಕಳದ ಕರಿಕಲ್ಲಿನ ಧ್ಯಾನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಪರಂಪರೆಯ ಉಳಿವು ಹಾಗೂ ಬೆಳವಣಿಗೆಗೆ ಧಾರ್ಮಿಕ ಸಂಸ್ಥೆಗಳ ಸಹಕಾರ ಅತ್ಯಗತ್ಯ. ಯಕ್ಷಗಾನ ಪ್ರದರ್ಶನಕ್ಕೆ ಸ್ವಾಮೀಜಿ ಅವಕಾಶ ನೀಡಿರುವುದಲ್ಲದೆ ಸಾಧಕ ಕಲಾವಿದರನ್ನು ಸನ್ಮಾನಿಸಿರುವುದು ಪ್ರಶಂಸನೀಯ. ಯಕ್ಷಗಾನ ಕಲೆಗೆ ಕೇವಲ ಕಲಾವಿದರು ಹಾಗೂ ಪ್ರೋತ್ಸಾಹಕರಿದ್ದರೆ ಸಾಲದು. ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಅಗತ್ಯ.” ಎಂದರು.
ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ “ಬದುಕಿನಲ್ಲಿ ಆನಂದ ಹಾಗೂ ಸುಖ ಪ್ರಾಪ್ತಿಗೆ ಧರ್ಮ ಪಾಲಿಸಬೇಕು. ಚಾತುರ್ಮಾಸ್ಯದ 50 ದಿನಗಳಲ್ಲಿ 50 ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಚಿಂತನೆ ನಡೆಸಿದ್ದೇವೆ.” ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ ಬಿ. ಜನಾರ್ದನ ಅಮ್ಮುಂಜೆ ಹಾಗೂ ಕಲಾವಿದ ಪಂಜ ಗುಡ್ಡಪ್ಪ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದಯಾನಂದ ಪಿ. ಬೆಳಾಲ್, ಕೃಷ್ಣ ನಾಯ್ಕ ಭಟ್ಕಳ, ವಿಠಲ ನಾಯ್ಕ, ಎಂ.ಎಸ್.ನಾಯ್ಕ, ಭಾಗವತ ಗಿರೀಶ್ ರೈ ಕಕ್ಕೆಪದವು ಮೊದಲಾದವರು ಉಪಸ್ಥಿತರಿದ್ದರು.