ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ವತಿಯಿಂದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಶ್ರೀ ಮಂಗಳಾ ಕಲಾ ವೇದಿಕೆಯಲ್ಲಿ ದಿನಾಂಕ 31 ಜನವರಿ 2026ರಂದು 16ನೇ ವಾರ್ಷಿಕೋತ್ಸವ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ. ಅರುಣ್ ಐತಾಳ್ “ಸಾಂಸ್ಕೃತಿಕವಾಗಿ ನಮ್ಮಲ್ಲಿರುವ ಅನೇಕ ಕಲಾಪ್ರಕಾರಗಳ ಮಧ್ಯೆ ಅಧ್ಯಾತ್ಮ ಚಿಂತನೆಯ ಹರಿಕಥಾ ಕಲೆಯ ಶ್ರವಣಕ್ಕೆ ಕೇಳುಗರಲ್ಲಿ ಆಸಕ್ತಿ ಹಾಗೂ ಶ್ರದ್ಧೆ ಹೆಚ್ಚಾಗಬೇಕಿದೆ. ಮನೋರಂಜನೆ ಬೇರೆ ಮನೋವಿಕಾಸದ ವಿಚಾರಗಳು ಬೇರೆ. ಆದರೆ ಹರಿಕಥಾ ಕಲೆ ಆನಂದದೊಂದಿಗೆ ಅರಿವನ್ನು ನೀಡುವ ವಿಶಿಷ್ಟ ಕಲೆ. ಹಾಗಾಗಿ ಈ ಕಲೆಗೆ ಪ್ರೋತ್ಸಾಹ ಅಗತ್ಯ” ಎಂದರು.

ಶ್ರೀ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಆಶೀರ್ವಚನ ನೀಡಿ, “ಕಣ್ಣಿಗೆ ಕಾಣದಂತಹ ಭಗವಂತನನ್ನು ನಮ್ಮೊಳಗೆ ಅರಸುವ ಆನಂದದಾಯಕ ಮಾಧ್ಯಮ ಹರಿಕಥೆ, ಹಾಗಾಗಿ ಈ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಹರಿಕಥಾ ಪರಿಷತ್ತಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮದು” ಎಂದರು.

ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರ್, ಅತಿಥಿಗಳಾದ ಉದ್ಯಮಿ ಎಂ. ರವೀಂದ್ರ ಶೇಟ್, ತುಳುಕೂಟ ಅಧ್ಯಕ್ಷೆ ಹೇಮಾ ನಿಸರ್ಗ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಹಿರಿಯ ಹರಿದಾಸರಾದ ಉಮೇಶ್ ಗೌತಮ್ ನಾಯಕ್ ಕಾರ್ಕಳ, ಹಿರಿಯ ಕಲಾಪೋಷಕರಾಗಿ ಸುಧಾಕರ್ ರಾವ್ ಪೇಜಾವರ, ಹಿರಿಯ ಹಿಮ್ಮೇಳ ವಾದಕಿಯಾದ ಗುಣವತಿ ಜಿ. ಆಚಾರ್ ಇವರನ್ನು ಸಮ್ಮಾನಿಸಲಾಯಿತು.

ಪರಿಷತ್ ಉಪಾಧ್ಯಕ್ಷ ನಾರಾಯಣ್ ರಾವ್, ಸಮಿತಿಯ ದಿವಾಕರ್ ಶೆಟ್ಟಿ ಸತೀಶ್ ಕಾಮತ್, ಮಂಗಲ್ ದಾಸ್ ಗುಲ್ವಾಡಿ, ವರದರಾಜ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ದೇವಿಕಾ ಕೆ., ಭಾವನಾ ನಾಯಕ್, ಹರಿದಾಸ ಉಮೇಶ್ ಗೌತಮ್ ನಾಯಕ್ ಇವರಿಂದ ಹರಿಕಥೆಗಳು ಜರಗಿದವು. ಸತ್ಯನಾರಾಯಣ ಐಲ, ಸುರೇಶ್ ಆಚಾರ್, ಸತೀಶ್ ಸಹಕರಿಸಿದರು. ಹರಿಕಥಾ ಪರಿಷತ್ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾಸ್ತಾವಿಸಿ, ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಡಾ. ಎಸ್.ಪಿ. ಗುರುದಾಸ್ ಸ್ವಾಗತಿಸಿ, ವಿಜಯಲಕ್ಷ್ಮೀ ಕುಂಬ್ಳೆ ಶ್ರೀನಿವಾಸ ಭಟ್ ಕಣ್ವತೀರ್ಥ, ಶ್ರದ್ಧಾ ಸಮಾನ ಪತ್ರ ವಾಚಿಸಿದರು. ಸಂಚಾಲಕ ಶಂನಾಡಿಗೆ ಕುಂಬ್ಳೆ ನಿರೂಪಿಸಿ, ವಂದಿಸಿದರು.
