ಹೊಸಕೋಟೆ : ಹೊಸಕೋಟೆಯ ನಿಂಬೆಕಾಯಿಪುರದ ‘ಜನಪದರು ರಂಗ ಮಂದಿರ’ದಲ್ಲಿ, ರಂಗಪಯಣ ತಂಡ ಬೆಂಗಳೂರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗಾಗಿ ಜುಲೈ 31ರಂದು 31 ಜಿಲ್ಲೆಗಳ 31 ರಂಗ ಮಂದಿರಗಳಲ್ಲಿ 31 ಕಲಾವಿದರು ಏಕಕಾಲದಲ್ಲಿ ನಿಗದಿತ ಸಮಯ ಸಂಜೆ 7-10ರಿಂದ 8-05ರವರೆಗೆ ರಾಜಗುರು ಹೊಸಕೋಟೆಯವರ ರಚನೆ – ಸಂಗೀತ – ನಿರ್ದೇಶನದಲ್ಲಿ – “55 ನಿಮಿಷದ ಒಂದು ಪ್ರೇಮ ಕಥೆ…” ನಾಟಕವನ್ನು ಬೆ೦ಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಜನಪದರು ತಂಡ’ದ ನಟ ನಾಗೇಶ್ ಬೋಧನ ಹೊಸಹಳ್ಳಿಯವರು ನಟಿಸಿ ಸೈ ಎನಿಸಿಕೊಂಡರು. ಪ್ರೇಕ್ಷಕರು ಕುತೂಹಲದಿಂದ ಏಕವ್ಯಕ್ತಿ ಪ್ರದರ್ಶನ ಸವಿದರು. ಅತಿಥಿಗಳಾಗಿ ಸಾಹಿತಿ ಡಾ. ಬಾಲಗುರುಮೂರ್ತಿ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ಎನ್. ನಾರಾಯಣಸ್ವಾಮಿ ಹಾಗೂ ಕಲಾವಿದ ನಾಗೇಶರನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ರ ಪಾಪಣ್ಣ ಕಾಟಂ ನಲ್ಲೂರು ಸನ್ಮಾನಿಸಿ ಗೌರವಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ದ ಬನಹಳ್ಳಿ, ಚಲಪತಿ ಹಾಗೂ ಮುನಿರಾಜು ಮತ್ತು ಇತರರು ಉಪಸ್ಥಿತರಿದ್ದರು.
ನಾಗೇಶ್ ಬೋಧನ ಹೊಸಹಳ್ಳಿ
‘ಬಯಸಿದಂತೆ ಬಾಳು ಸಿಗದ… ವಾಸ್ತವದ 55 ನಿಮಿಷಗಳ ಒಂದು ಪ್ರೇಮ ಕಥೆ’
ಈ ಬದುಕೇ ಹೀಗೆ ಕಟು ಸತ್ಯಗಳ ಕಥನ. ಮುಗ್ಧ ಬಾಲ್ಯದಿಂದ ಭ್ರಾಮಕ ಯವ್ವನ ಕಾಲೇಜಿಗೆ ಕಾಲಿಡುತ್ತಲೇ ಚಿಗುರೊಡೆದ ಮೀಸೆಗೆ ಚೆಲುವೆ ಚಿಂತೆ. ಅಲ್ಲಿಯ ಪ್ರೇಮದ ಹುಡುಗಿಯ ಹುಡುಗಾಟದ ಮಧ್ಯೆ, ನಗರದ ನಾಗಾಲೋಟದ ಬದುಕಿಗೆ ನೆಲೆ ಕಳೆದುಕೊಂಡ ಕುಟುಂಬದ ಬವಣೆಯಲ್ಲಿ ಮಾಯವಾಗುವ ಪ್ರೀತಿಯ ಹುಡುಗಿಯ ಹುಡುಕಾಟ, ದೈನಂದಿನ ಸಮಸ್ಯೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಯುವಕ, ಸಮಯದ ಬಿಡುವಿನ ಮಧ್ಯೆ ಹುಡುಗಿಯ ಕುಟುಂಬ, ಆದರೆ ಪ್ರಿಯತಮೆಯ ಸಾವಿನ ದುರಂತ ಅಂತ್ಯ ಕಥೆಗೆ ಕುತೂಹಲ ತಂದು, ಮುಂದೇನು ? ಅನ್ನುವಷ್ಟರಲ್ಲೇ ಕಥೆಯ ಅಂತ್ಯದಲ್ಲಿ ನಾಟಕಕಾರನ ಕೈಚಳಕ ಕಾಣುತ್ತದೆ. ಇಂದಿನ ಕೆಲವು ಯುವಕರು ಪ್ರೇಮದ ಅಮಲಿನಲ್ಲಿ ತನ್ನ ಬದುಕಿನಿಂದಾಗಿ ಇಡೀ ಕುಟುಂಬದ ಬಾಳ ನೆಮ್ಮದಿಯನ್ನು ಹದಗೆಡಿಸಿ ನರಕ ದರ್ಶನ ಮಾಡುವಂತೆ ಬದುಕುವ ಇಂದಿನ ಯುವ ಸಮುದಾಯವು ಆಲೋಚಿಸುವಂತೆ ಮಾಡುತ್ತದೆ. ರಾಜಗುರು ಹೊಸಕೋಟೆಯವರ ಕಥೆ ಮುಂದೆ ನಾಟಕ ನೋಡುವ ಹಾಗೆ ಮಾಡಿತು. ಸರಳ ರ೦ಗ ಪರಿಕರ, ಸಂಗೀತ ಸಮರ್ಪಕವಾಗಿತ್ತು. ಜನಪದರು ತಂಡದ ನಾಗೇಶ ಬೋಧನ ಹೊಸಹಳ್ಳಿ ಯಾವ ರಂಗ ಪದವೀಧರರಲ್ಲದಿದ್ದರೂ, ಹವ್ಯಾಸಿ ಅನುಭವದ ಮೂಲಕ ಏಕವೃಕ್ತಿ ಪ್ರದರ್ಶನ ನೀಡುವಲ್ಲಿ ಸಮರ್ಥವಾಗಿ ವಾಚಿಕ, ಆಂಗಿಕ ಅಭಿನಯಗಳನ್ನು ಪ್ರದರ್ಶಿಸಿದರು. ಒಟ್ಟಾರೆ ಒಂದು ಸು೦ದರ ಪ್ರಯತ್ನ.
- ಜಗದೀಶ ಕೆಂಗನಾಳ್