ಮಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ‘ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ ದಿನಾಂಕ 26-08-2023 ಶನಿವಾರ ಬೆಳಿಗ್ಗೆ 9.00ರಿಂದ ತಲಪಾಡಿಯ ವಿಶ್ವಾಸ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9.00ರಿಂದ ಮಂಗಳೂರಿನ ಪಜೀರು, ನೃತ್ಯ ಲಹರಿ ನಾಟ್ಯಾಲಯದ ನೃತ್ಯಗುರು ವಿದುಷಿ ಶ್ರೀಮತಿ ರೇಷ್ಮಾ ನಿರ್ಮಲ್ ಭಟ್ ಇವರ ಶಿಷ್ಯ ವೃಂದದವರಿಂದ ‘ನೃತ್ಯ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಇವರಿಂದ ಉದ್ಘಾಟನೆಗೊಳ್ಳುವ ಈ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ವಹಿಸಲಿರುವರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ. ಆಶ್ರಫ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ಮುಲ್ಲೈ ಮುಗಿಲನ್ ಇವರುಗಳು ವಿಶೇಷ ಅಭ್ಯಾಗತರಾಗಿ ಭಾಗವಹಿಸುತ್ತಾರೆ.
ಘಂಟೆ 11.30ಕ್ಕೆ ಗಡಿನಾಡಿನ ಸಮಸ್ಯೆ – ಸವಾಲುಗಳು ಇದರ ಬಗ್ಗೆ ಉಪನ್ಯಾಸ ನಡೆಯಲಿದ್ದು, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಭಾಷೆ’ಯ ಬಗ್ಗೆ ಕಾಸರಗೋಡಿನ ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರತ್ನಾಕರ ಮಲ್ಲಮೂಲೆ ಮತ್ತು ‘ಶಿಕ್ಷಣ’ದ ಬಗ್ಗೆ ಮಂಗಳೂರಿನ ಶಿಕ್ಷಣ ಪದವಿ ವಿದ್ಯಾರ್ಥಿಯಾದ ಶ್ರೀ ಕಾರ್ತಿಕ ಪಡ್ರೆ ಇವರು ಉಪನ್ಯಾಸ ನೀಡಲಿದ್ದಾರೆ.
12.30ಕ್ಕೆ ಕೊಣಾಜೆಯ ರೆಹಮಾನ್ ರವರಿಂದ ಮಿಮಿಕ್ರಿ ಕಾರ್ಯಕ್ರಮ ನಂತರ 12.40ಕ್ಕೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಟಿ.ಎ.ಎನ್. ಖಂಡಿಗೆ ಇವರು ‘ಗಡಿನಾಡಿನ ಸಾಹಿತ್ಯ ಪರಂಪರೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಘಂಟೆ 1.10ಕ್ಕೆ ಸಾಂಸ್ಕೃತಿಕ ವೈವಿಧ್ಯ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ‘ಸಾಹಿತ್ಯ – ಗಾನ – ನೃತ್ಯವೈಭವ ನಡೆಯಲಿದೆ.
ಮಧ್ಯಾಹ್ನ 2.00ರಿಂದ ಕನ್ನಡ, ತುಳು, ಬ್ಯಾರಿ, ಕೊಂಕಣಿ, ಮಲಯಾಳ, ಹವ್ಯಕ, ಮರಾಠಿ, ಕರ್ಹಾಡ ಮತ್ತು ಉರ್ದು ಭಾಷೆಗಳಲ್ಲಿ ‘ಬಹುಭಾಷಾ ಕವಿಗೋಷ್ಠಿ’ ನಡೆಯಲಿದ್ದು, ಕಾಸರಗೋಡಿನ ಸಾಹಿತಿ, ಕವಿ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕರವರು ಅಧ್ಯಕ್ಷತೆ ವಹಿಸಲಿದ್ದಾರೆ. 3.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 3-15ರಿಂದ ‘ಸಾಂಸ್ಕೃತಿಕ ಮತ್ತು ಸಾಮರಸ್ಯದ ಕಥನಗಳು’ ಎಂಬ ವಿಷಯಾಧಾರಿತ ಸಂವಾದ ಗೋಷ್ಠಿ. ಇದರ ಅಧ್ಯಕ್ಷತೆಯನ್ನು ಕಾಸರಗೋಡಿನ ಶ್ರೀ ಪಿ.ಎನ್. ಮೂಡಿತ್ತಾಯ ಇವರು ವಹಿಸಲಿದ್ದು, ಶ್ರೀಮತಿ ಆಯಿಶಾ ಎ.ಎ. ಪೆರ್ಲ, ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಮತ್ತು ಡಾ. ಯಶುಕುಮಾರ್, ಬಂಟ್ವಾಳ ಇವರುಗಳು ಸಂವಾದಕರಾಗಿ ಭಾಗವಹಿಸಲಿದ್ದಾರೆ.
3.45ಕ್ಕೆ ಶ್ರೀ ತೋನ್ಸೆ ಪುಷ್ಕಳ ಕುಮಾರ ಮತ್ತು ಶ್ರೀ ವಸಂತ ಬಾರಡ್ಕ ‘ಕವಿಗಾಯನ’ ಹಾಗೂ 4.15ಕ್ಕೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮಗಳು ನಡೆಯಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಡಿನಾಡ ಕನ್ನಡ ಉತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ವರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯತನ ಪಡೆಯಲಿಚ್ಚಿಸುವವರ ಗಮನಕ್ಕೆ ಗಡಿನಾಡ ಕನ್ನಡ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ದಿನ ಈ ಕೆಳಗೆ ತಿಳಿಸಿರುವ ವಿವರಗಳೊಂದಿಗೆ ಸ್ವಾಗತ ಕೌಂಟರಿನಲ್ಲಿ ನೋಂದಾಯಿಸಲು ಅವಕಾಶವಿದೆ. ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಆಧಾರ ಕಾರ್ಡ್ ಜೆರಾಕ್ಸ್, ರೂ.410/-ನ್ನು ನೀಡಿ ಸ್ಥಳದಲ್ಲಿಯೇ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧ್ಯಕ್ಷರು ದ.ಕ.ಜಿ.ಕ.ಸಾ.ಪ. 9448558583.