ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ ‘ಅರ್ಥಾಂಕುರ’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 20-08-2023ರಂದು ಜರಗಿತು.
ಈ ಕಾರ್ಯಕ್ರಮವನ್ನು ಉಪನ್ಯಾಸಕ ಸುಜಯೀಂದ್ರ ಹಂದೆಯವರು ಮದ್ದಳೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ “ನಾಟ್ಯ ಶಾಸ್ತ್ರದ ಭರತ ಹೇಳಿದ ಚಾಕ್ಷುಸೀ ಯಜ್ಞ ಯಕ್ಷಗಾನಕ್ಕೆ ಬಹಳ ಸೂಕ್ತವಾಗುತ್ತದೆ. ಕಣ್ಣುಗಳಿಗೆ ಯಜ್ಞ, ಕಣ್ಣುಗಳಿಗೆ ಸುಖವನ್ನು ನೀಡುವಂತಹ ಕಲೆ ಯಕ್ಷಗಾನ. ತಾಳಮದ್ದಳೆ ಯಕ್ಷಗಾನದ ಒಂದು ಪ್ರಕಾರ. ತಾಳಮದ್ದಳೆಯಲ್ಲಿ ಸಾಹಿತ್ಯ ಎಂಬ ಲತೆಯಲ್ಲಿ ನವರಸಗಳೆಂಬ ಹೂವರಳಿ ಅರ್ಥಾಂಕುರವೆಂಬ ಚಿಗುರು ಈ ವೇದಿಕೆಯಲ್ಲಿ ಆಗಾಗ ಫಸಲನ್ನು ಕೊಡುತ್ತಿರುವಂತಾಗಬೇಕು. ತಾಳಮದ್ದಳೆಯು ವಾಚಿಕ ಕಲೆ ಎನ್ನುವುದನ್ನು ಯಕ್ಷಗಾನದಲ್ಲಿ ಹಿಂದಿನ ಅನೇಕರು ಪ್ರಬುದ್ಧವಾಗಿಸಿದ್ದಾರೆ. ಇಂತಹ ಪ್ರಕಾರಕ್ಕೆ ಹೊಸ ತಲೆಮಾರಿನ ಅರ್ಥಧಾರಿಗಳು ಈ ವೇದಿಕೆಯಲ್ಲಿ ಬೆಳೆಯಬೇಕು, ಬೆಳಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಂದಟ್ಟು ಸುದರ್ಶನ ಉರಾಳ, ಡಾ. ಗಣೇಶ್ ಯು, ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಉಪನ್ಯಾಸಕ ರಾಘವೇಂದ್ರ ತುಂಗ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸುಜಯೀಂದ್ರ ಹಂದೆಯವರ ನಿರ್ದೇಶನದಲ್ಲಿ ‘ಅರ್ಥಾಂಕುರ’ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.