ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ “ಯಕ್ಷ ದೀವಟಿಗೆ” ದಿನಾಂಕ 14-08-2023ರ ಸೋಮವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಅನಾವರಣಗೊಂಡಿತು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕರು, ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸರೂ ಆದ ಡಾ.ಎಂ.ಪ್ರಭಾಕರ ಜೋಷಿಯವರು “ಯಕ್ಷಗಾನವು ರೂಪ ಪ್ರಧಾನವಾದ ಕಲೆ. ಯಾವುದೇ ಕಲೆಯ ಸ್ವರೂಪ ಪ್ರಜ್ಞೆಯ ಅರಿವಿಲ್ಲದೆ ಮಾಡುವ ವಿಮರ್ಶೆ ಸಾಧುವಾದುದಲ್ಲ. ಕಲಾ ವಿಮರ್ಶೆಗೆ ಅನೇಕ ಮುಖಗಳಿವೆ. ಯಕ್ಷಗಾನದ ವಿಮರ್ಶೆಗೆ ಕಾರಂತರು, ಸೇಡಿಯಾಪು ಹಾಗೂ ರಾಘವನ್ ಮೊದಲಾದ ಹಿರಿಯರ ಪರಂಪರೆಯಿದೆ. ವಿಮರ್ಶೆಯು ಯಾವುದೇ ಕಲೆಯಲ್ಲಿ ಪ್ರೀತಿಯನ್ನು ಮತ್ತು ತಿಳುವಳಿಕೆಯನ್ನು ಬೆಳೆಸಬೇಕು. ಆಳಕ್ಕಿಳಿಯದೆ ತಳಮಟ್ಟದ ಅಧ್ಯಯನ ಇಲ್ಲದೆ ಸರಿ ತಪ್ಪುಗಳ ವಿವೇಚನೆ ಕೂಡದು. ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನವೆಂದರೆ ಅದು ಯಕ್ಷಗಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಖ್ಯವಾಗಿ ಇತ್ತೀಚೆಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಅಸಮತೋಲನದ ಸಮಸ್ಯೆಯಿದೆ. ‘ಯಕ್ಷಗಾನ’ ಎಂಬುದು ಒಂದು ಸಮಷ್ಠಿ ಕಲೆ. ಗಾನ, ಆಹಾರ್ಯ ಹಾಗೂ ಆಂಗಿಕಾಭಿನಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡದೆ ಅದನ್ನು ಸಮಗ್ರವಾಗಿ ಸ್ವೀಕರಿಸುವುದೇ ಅದರ ಸೌಂದರ್ಯ. ಸ್ವತಃ ಕಲಾವಿದ ಮತ್ತು ನಿರ್ದೇಶಕರಾಗಿ ರಂಗಾನುಭವವನ್ನು ಹೊಂದಿರುವ ಹಂದೆಯವರ ‘ಯಕ್ಷ ದೀವಟಿಗೆ’ಯಲ್ಲಿ ಯಕ್ಷಗಾನ ರಂಗದ ಉನ್ನತಿಯ ಕಾಳಜಿ ಮತ್ತು ವ್ಯವಸ್ಥಿತವಾಗಿ ಕಲೆ ಉಳಿಯಬೇಕೆಂಬ ತುಡಿತವಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ “ಕಲೆ ಸಾಹಿತ್ಯ ನಮ್ಮ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲುದು. ಎಳವೆಯಲ್ಲೇ ಕೊಟ್ಟ ಸಂಸ್ಕಾರವು ಮುಂದೆ ಬಾಳಿನ ಬೆಳಕಾಗಿ ಮೂಡಿಬರುತ್ತವೆ. ಯಕ್ಷಗಾನ ನಮ್ಮನ್ನು ಮೌಲ್ಯವಂತರನ್ನಾಗಿ ಮಾಡಿವೆ” ಎಂದು ಶುಭಹಾರೈಸಿದರು.
ಕೃತಿಯ ಲೇಖಕರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲಾವಿದ ಹಾಗೂ ಸಾಹಿತಿ ಜನಾರ್ದನ ಹಂದೆಯವರು ವಂದಿಸಿದರು. ಕುಮಾರಿ ಕಾವ್ಯ ನಿರೂಪಿಸಿದರು.